×
Ad

ವಿವಾದದ ಸ್ವರೂಪ ಪಡೆದ ಬೆಂಗಳೂರಿನ ರಸ್ತೆ ಗುಂಡಿ ಸಮಸ್ಯೆ ; ನವೆಂಬರ್ ಒಳಗೆ ರಸ್ತೆ ಗುಂಡಿ ಮುಚ್ಚಲು ಅಂತಿಮ ಗಡವು : ಡಿ.ಕೆ.ಶಿವಕುಮಾರ್

Update: 2025-09-17 19:37 IST

ಬೆಂಗಳೂರು, ಸೆ. 17: ಉದ್ಯಾನನಗರಿ ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳ ಸಮಸ್ಯೆ ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು, ಐಟಿ ಉದ್ಯಮಿಗಳು ಸೇರಿದಂತೆ ಸಾರ್ವಜನಿಕ ವಲಯದ ಆಕ್ರೋಶಕ್ಕೆ ಕಾರಣವಾಗಿದೆ.

ಈ ಮಧ್ಯೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬೆಂಗಳೂರಿನ ರಸ್ತೆ ಗುಂಡಿಗಳ ಸಮಸ್ಯೆಯನ್ನು ಬಗೆಹರಿಸಲು ನವೆಂಬರ್ ಒಳಗೆ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ಗುತ್ತಿಗೆದಾರರಿಗೆ ಅಂತಿಮ ಗಡುವು ನೀಡಲಾಗಿದೆ. ಸ್ವಚ್ಛ ಬೆಂಗಳೂರು ಹಾಗೂ ಸುಗಮ ಸಂಚಾರವೇ ನಮ್ಮ ಗುರಿಯಾಗಿರುವುದರಿಂದ ಆದಷ್ಟು ಬೇಗ ರಸ್ತೆ ಗುಂಡಿಗಳಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮುಕ್ತಿ ನೀಡಲಿದೆ’ ಎಂದು ಭರವಸೆ ನೀಡಿದ್ದಾರೆ.

ಬುಧವಾರ ಸಾಮಾಜಿಕ ಜಾಲತಾಣ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಡಿ.ಕೆ.ಶಿವಕುಮಾರ್, 694 ಕೋಟಿ ರೂ.ವೆಚ್ಚದಲ್ಲಿ 349 ಕಿ.ಮೀ ಉದ್ದದ 182 ರಸ್ತೆಗಳ ಬ್ಲ್ಯಾಕ್ ಟಾಪಿಂಗ್ ಕಾಮಗಾರಿ ನಡೆಯುತ್ತಿದೆ. ಈ ಕಾಮಗಾರಿ ವೇಳೆ ರಸ್ತೆಯಲ್ಲಿ ನೀರು ನಿಲ್ಲದಂತೆ, ಗುಂಡಿಗಳು ಇಲ್ಲದಂತೆ ಡಾಂಬರೀಕರಣ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

401 ಕಿ.ಮೀ ಉದ್ದದ 178 ರಸ್ತೆಗಳು ದೋಷಮುಕ್ತವಿದ್ದು, ಅಲ್ಲಲ್ಲಿ ಬಿದ್ದಿರುವ ಗುಂಡಿ ಮತ್ತು ಮೇಲ್ಮೈ ಪದರ ಹಾಳಾಗಿದ್ದರೆ ಗುತ್ತಿಗೆದಾರರೆ ದುರಸ್ತಿಪಡಿಸಲು ಈಗಾಗಲೇ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಸುಧಾರಣೆಗೆ ಆಗ್ರಹ: ಕಳಪೆ ರಸ್ತೆಯಿಂದ ನಗರದ ಹೊರ ವರ್ತುಲ ರಸ್ತೆಯಲ್ಲಿರುವ ಕಚೇರಿಯನ್ನು ಸ್ಥಳಾಂತರಗೊಳಿಸುವುದಾಗಿ ಬೆಂಗಳೂರು ಮೂಲದ ಲಾಜಿಸ್ಟಿಕ್ ಟೆಕ್ ಕಂಪೆನಿ ‘ಬ್ಲ್ಯಾಕ್‍ಬಕ್’ ಘೋಷಿಸಿದ ಹಿನ್ನೆಲೆಯಲ್ಲಿ, ‘ಮೂಲಭೂತ ಸೌಕರ್ಯಗಳ ಸುಧಾರಣೆಗೆ ಸರಕಾರ ಮಧ್ಯಪ್ರವೇಶ ಮಾಡಬೇಕು’ ಎಂದು ಉದ್ಯಮಿಗಳಾದ ಮೋಹನದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಷಾ ಒತ್ತಾಯಿಸಿದ್ದಾರೆ.

ಬುಧವಾರ ಎಕ್ಸ್‌ ನಲ್ಲಿ ಪೋಸ್ಟ್ ಹಾಕಿರುವ ಇನ್ಫೋಸಿಸ್ ಸಂಸ್ಥೆ ಮುಖ್ಯ ಹಣಕಾಸು ಅಧಿಕಾರಿ ಮೋಹನದಾಸ್ ಪೈ, ‘ಇದು ಬೆಂಗಳೂರಿನಲ್ಲಿ ಭಾರಿ ಆಡಳಿತ ವೈಫಲ್ಯದ ಪ್ರತೀಕ. ದಯವಿಟ್ಟು ಗಮನಿಸಿ, ಕಂಪೆನಿಗಳು ಹೊರವರ್ತುಲ ರಸ್ತೆಯಿಂದ ಸ್ಥಳಾಂತರಗೊಳ್ಳುತ್ತಿವೆ. ಆಶಾದಾಯಕ ಸ್ಥಿತಿ ಇಲ್ಲ. ದಯವಿಟ್ಟು ಮಧ್ಯಪ್ರದೇಶ ಮಾಡಬೇಕು’ ಎಂದು ಕೋರಿದ್ದಾರೆ.

‘ಒಂಭತ್ತು ವರ್ಷಗಳಿಂದ ಬೆಂಗಳೂರಿನ ಬೆಳ್ಳಂದೂರು ನಮ್ಮ ಕಚೇರಿ ಮತ್ತು ಮನೆ ಆಗಿದೆ. ಆದರೆ, ಇದೀಗ ಇಲ್ಲಿ ಮುಂದುವರಿಯುವುದು ಕಷ್ಟ. ನಾವು ಇಲ್ಲಿಂದ ಹೊರಗೆ ಹೋಗಲು ನಿರ್ಧರಿಸಿದ್ದೇವೆ. ನಮ್ಮ ಸಹೋದ್ಯೋಗಿಗಳಿಗೆ ಸಂಚಾರ ಮಾಡುವುದು ಕಷ್ಟವಾಗಿದೆ. ಒಂದು ಕಡೆಯ ಪ್ರಯಾಣಕ್ಕೆ ಒಂದೂವರೆ ಗಂಟೆ ಸಮಯ ಬೇಕು. ಬೆಂಗಳೂರಿನ ರಸ್ತೆಗಳು ಗುಂಡಿ ಮತ್ತು ಧೂಳಿನಿಂದ ತುಂಬಿವೆ. ಅವುಗಳನ್ನು ಸರಿಪಡಿಸುವ ಉದ್ದೇಶವೂ ಇದ್ದಂತಿಲ್ಲ. ಐದು ವರ್ಷದಲ್ಲಿ ಯಾವುದೇ ಬದಲಾವಣೆ ಕಾಣಲಿಲ್ಲ'

ರಾಜೇಶ್ ‘ಬ್ಲ್ಯಾಕ್ ಬಕ್' ಕಂಪೆನಿ ಸಿಇಒ

‘ನಿಮ್ಮ ಕಂಪೆನಿಯನ್ನು ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಬಹುದು. ನಾವು ದೇಶದ ಸ್ವಚ್ಛ ನಗರಗಳ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದೇವೆ. ಗುಣಮಟ್ಟದ ಮೂಲಸೌಕರ್ಯ ನಿರ್ಮಾಣವಾಗುತ್ತಿದೆ. ಮಹಿಳೆಯರಿಗೆ ಸುರಕ್ಷಿತ ನಗರವೆಂದು ರೇಟಿಂಗ್ ಪಡೆದಿದ್ದೇವೆ. ನಿಮ್ಮ ಕಂಪೆನಿಯನ್ನು ಇಲ್ಲಿಗೆ ಸ್ಥಳಾಂತರಿಸುವ ಬಗ್ಗೆ ಒಮ್ಮೆ ಪರಿಶೀಲಿಸಿ'

-ನಾರಾ ಲೋಕೇಶ್ ಆಂಧ್ರ ಮಾಹಿತಿ ತಂತ್ರಜ್ಞಾನ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News