ಬೆಂಗಳೂರು | ಸಿನಿಮಾ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ಲೈಂಗಿಕ ಕಿರುಕುಳ ಆರೋಪ: ನಿರ್ದೇಶಕ ಹೇಮಂತ್ ಕುಮಾರ್ ಬಂಧನ
ಹೇಮಂತ್ ಕುಮಾರ್ (Photo credit: deccanherald.com)
ಬೆಂಗಳೂರು: ಸಿನಿಮಾ ಮಾಡುವುದಾಗಿ ನಂಬಿಸಿ ಕಿರುತೆರೆ ನಟಿಗೆ ಲೈಂಗಿಕ ಮತ್ತು ಮಾನಸಿಕ ಕಿರುಕುಳ ನೀಡಿದ ಆರೋಪದಡಿ ಇಲ್ಲಿನ ರಾಜಾಜಿನಗರ ಠಾಣಾ ಪೊಲೀಸರು ನಿರ್ದೇಶಕನೊಬ್ಬನನ್ನು ಬಂಧಿಸಿದ್ದಾರೆ.
ಅನ್ನಪೂರ್ಣೇಶ್ವರಿನಗರದ ನಿವಾಸಿಯಾದ ನಿರ್ದೇಶಕ, ನಿರ್ಮಾಪಕ ಹೇಮಂತ್ ಕುಮಾರ್(34) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಿರುತೆರೆ ನಟಿ ಹಾಗೂ ಬಿಗ್‍ಬಾಸ್‍ನ ಓಟಿಟಿ ಸ್ಪರ್ಧಿಯು ನೀಡಿದ ದೂರಿನನ್ವಯ ಲೈಂಗಿಕ ಕಿರುಕುಳ, ವಂಚನೆ ಹಾಗೂ ಜೀವ ಬೆದರಿಕೆ ಪ್ರಕರಣದಡಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
2022ರಲ್ಲಿ ನಿರ್ದೇಶಕ, ನಿರ್ಮಾಪಕ ಎಂದು ಹೇಳಿಕೊಂಡು ಪರಿಚಯವಾದ ಹೇಮಂತ್ ಕುಮಾರ್, ತಾನು ‘ರಿಚ್ಚಿ’ ಎಂಬ ಸಿನಿಮಾ ಮಾಡುತ್ತಿದ್ದು, ಅದರಲ್ಲಿ ನಾಯಕಿಯಾಗಿ ನಟಿಸುವಂತೆ ನಟಿಗೆ ಆಫರ್ ನೀಡಿದ್ದ. ಇದಕ್ಕೆ ಒಪ್ಪಿಕೊಂಡ ನಟಿಗೆ 2 ಲಕ್ಷ ರೂ. ಸಂಭಾವನೆ ನಿಗದಿ ಮಾಡಿ, ಮುಂಗಡವಾಗಿ 60 ಸಾವಿರ ರೂ. ನೀಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಚಿತ್ರೀಕರಣ ಆರಂಭವಾದ ಬಳಿಕ ಆರೋಪಿಯು ಹಲವು ಕಾರಣ ನೀಡಿ ಚಿತ್ರೀಕರಣವನ್ನು ಮುಂದೂಡಿದ್ದಾನೆ. ಬಳಿಕ ಚಿತ್ರದಲ್ಲಿ ಅಶ್ಲೀಲ ಬಟ್ಟೆ ತೊಡುವಂತೆ ಮತ್ತು ಅಸಭ್ಯವಾಗಿ ನಟಿಸುವಂತೆ ಪದೇ ಪದೇ ಒತ್ತಾಯಿಸಿದ್ದಲ್ಲದೆ, ಅಸಭ್ಯ ರೀತಿಯಲ್ಲಿ ಸ್ಪರ್ಶಿಸಿ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಒಪ್ಪಂದದ ಅವಧಿ ಮುಗಿದಿದ್ದರೂ, ಸಿನಿಮಾ ಚೇಂಬರ್ ಸಮ್ಮುಖದಲ್ಲಿ ಬಲವಂತವಾಗಿ ಅವಧಿ ವಿಸ್ತರಿಸಿ ಚಿತ್ರೀಕರಣ ಪೂರ್ಣಗೊಳಿಸಲಾಗಿದೆ. ನಂತರ ಮುಂಬೈನಲ್ಲಿ ಸಿನಿಮಾ ಪ್ರಚಾರದ ವೇಳೆ ಕೂಡ ಆರೋಪಿ ಅಸಭ್ಯವಾಗಿ ವರ್ತಿಸಿದ್ದನು ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಚಿತ್ರೀಕರಣದ ಬಳಿಕ ಬಾಕಿ ಹಣಕ್ಕಾಗಿ ಆರೋಪಿ ನೀಡಿದ್ದ ಚೆಕ್ ಬೌನ್ಸ್ ಆಗಿದೆ. ಈ ಬಗ್ಗೆ ಪ್ರಶ್ನಿಸಿದಾಗ, ನಟಿಯ ಮೊಬೈಲ್ ಸಂಖ್ಯೆ ಇರುವ ಒಪ್ಪಂದದ ಪ್ರತಿಯನ್ನು ಆರೋಪಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಇದರಿಂದಾಗಿ ನಟಿಗೆ ಹತ್ತಾರು ಮಂದಿಯಿಂದ ಕರೆಗಳು ಬಂದಿದ್ದು, ಬೆದರಿಕೆ ಎದುರಿಸುವಂತಾಗಿದೆ. ಅಲ್ಲದೆ, ರಿಚ್ಚಿ ಸಿನಿಮಾದ ಕೆಲವು ಸೆನ್ಸಾರ್ ಆಗದ ದೃಶ್ಯಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿ ದುರ್ಬಳಕೆ ಮಾಡಿದ್ದಾನೆ. ಈ ಸಂಬಂಧ ನಟಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕೆಲವು ಕಡೆ ಸಿನಿಮಾ ಪ್ರಚಾರಕ್ಕೆ ನಿರಾಕರಿಸಿದಾಗ, ನಟಿ ಮತ್ತು ಅವರ ತಾಯಿಗೆ ಆರೋಪಿ ಜೀವ ಬೆದರಿಕೆ ಹಾಕಿದ್ದಾನೆ. ಈ ಮಧ್ಯೆ, 2025ರ ಸೆಪ್ಟೆಂಬರ್ 17ರಂದು ಮದ್ಯದ ಅಮಲಿನಲ್ಲಿ ಕರೆ ಮಾಡಿ, ತನ್ನ ಮತ್ತು ತನ್ನ ತಾಯಿಯ ಪ್ರಾಣ ತೆಗೆಯುವುದಾಗಿ ಬೆದರಿಕೆ ಹಾಕಿದ್ದಲ್ಲದೆ, ಕೆಲವು ರೌಡಿಗಳನ್ನು ಮನೆಗೆ ಕಳುಹಿಸಿ ಹೆದರಿಸಿದ್ದಾನೆ ಎಂದು ನಟಿ ದೂರಿನಲ್ಲಿ ವಿವರಿಸಿದ್ದಾರೆ.