ಆರೆಸ್ಸೆಸ್ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ: ಪ್ರಿಯಾಂಕ್ ಖರ್ಗೆ
ದಾಖಲೆ ಬಿಡುಗಡೆ ಮಾಡಿದ ಸಚಿವರು
ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ''ಆರೆಸ್ಸೆಸ್ ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷಗಳಾಗಿವೆ'' ಎಂದು ಆರೋಪಿಸಿರುವ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ, ಇದಕ್ಕೆ ಸಂಬಂಧಿಸಿದಂತೆ ಇಂದು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ತನ್ನ 'ಎಕ್ಸ್' ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿರುವ ಪ್ರಿಯಾಂಕ್ ಖರ್ಗೆ, ''ಆರೆಸ್ಸೆಸ್ 1948ರ ಫೆಬ್ರವರಿ 24ರಂದು ರಾಷ್ಟ್ರಧ್ವಜವನ್ನು ಹೇಗೆ ಅವಮಾನಿಸಿತ್ತು ಎಂಬುದನ್ನು ಕೇಂದ್ರ ಸರಕಾರದ ಗೃಹ ಸಚಿವಾಲಯವು ಪಂಜಾಬ್ ನ ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರ ಇಲ್ಲಿದೆ'' ಎಂದು ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹಂಚಿಕೊಂಡಿದ್ದಾರೆ.
'' ಆರೆಸ್ಸೆಸ್ ನಮ್ಮ ರಾಷ್ಟ್ರಧ್ವಜಕ್ಕೆ ಅಗೌರವ ತೋರಿ 100 ವರ್ಷ, ಸ್ವಾತಂತ್ರ್ಯ ಚಳವಳಿಗೆ ದ್ರೋಹ ಬಗೆದು 100 ವರ್ಷ, ಭಾರತದ ಸಂವಿಧಾನವನ್ನು ವಿರೋಧಿಸಿ 100 ವರ್ಷ, ರಾಷ್ಟ್ರ ವಿರೋಧಿತ್ವಕ್ಕೆ 100 ವರ್ಷಗಳು'' ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
''ಇತಿಹಾಸವು ಆರೆಸ್ಸೆಸ್ ನಮ್ಮ ದೇಶಕ್ಕೆ ಮಾಡಿರುವ ನಿರ್ಲಜ್ಜ ದ್ರೋಹದ ನಿದರ್ಶನಗಳಿಂದ ತುಂಬಿದೆ. ಇಡೀ ಬಿಜೆಪಿ ವ್ಯವಸ್ಥೆ ಎಷ್ಟೇ ಪ್ರಯತ್ನಿಸಿದರೂ ಆರೆಸ್ಸೆಸ್ ನ ಸಂವಿಧಾನ ವಿರೋಧಿ ಚರಿತ್ರೆಯನ್ನು ಎಂದಿಗೂ ಮರೆಮಾಚಲು ಸಾಧ್ಯವಿಲ್ಲ. ಬಿಜೆಪಿ ನಾಯಕರು ಮತ್ತು ಸ್ವಯಂಸೇವಕರು ನಿಜವಾದ ಆರೆಸ್ಸೆಸ್ ಇತಿಹಾಸವನ್ನು ತಿಳಿದುಕೊಳ್ಳುವ ಸಮಯ ಇದು'' ಎಂದು ಹೇಳಿದ್ದಾರೆ.