ದಕ್ಷಿಣ ಕನ್ನಡಿಗರ ಸಂಘದಿಂದ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಹಾಗೂ ಪ್ರತಿಭಾ ಪುರಸ್ಕಾರ
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯವರು ದೇಶದ ಆರ್ಥಿಕತೆಗೆ ವಿಶೇಷ ಕೊಡುಗೆ ನೀಡಿದ್ದಾರೆ. ಜೊತೆಗೆ ಬ್ಯಾಂಕಿಂಗ್, ಹೋಟೆಲ್, ಕಲೆ, ಸಂಗೀತ, ಸಾಹಿತ್ಯ ಹಾಗೂ ಚಲನಚಿತ್ರ ಉದ್ಯಮದಲ್ಲಿನ ಸಾಧನೆಯನ್ನು ಜಗತ್ತು ತಿರುಗಿ ನೋಡುವಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಮಾಜಿ ಸಿಎಂ ಸದಾನಂದಗೌಡ ಹೇಳಿದರು.
ದಕ್ಷಿಣ ಕನ್ನಡಿಗರ ಸಂಘ ವತಿಯಿಂದ ಶನಿವಾರ ಇಲ್ಲಿನ ನಯನ ಸಭಾಂಗಣದಲ್ಲಿ ನಡೆದ ಕರಾವಳಿ ರತ್ನ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕೆನರಾ ಬ್ಯಾಂಕ್, ವಿಜಯ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕರ್ನಾಟಕ ಬ್ಯಾಂಕ್ ಹೀಗೆ ಬ್ಯಾಂಕಿಂಗ್ ವಲಯದಲ್ಲಿ ಅಗ್ರಗಣ್ಯ ಸಾಧನೆ ಮಾಡಲಾಗಿದೆ. ಜತೆಗೆ ದೇಶ ವಿದೇಶದಲ್ಲಿ ಹೋಟೆಲ್ ಉದ್ಯಮ ಸ್ಥಾಪಿಸಿ ಯಶ ಗಳಿಸಲಾಗಿದೆ. ಇತ್ತೀಚೆಗೆ ಜಗತ್ತಿನಲ್ಲಿ ಹೆಸರು ಮಾಡಿರುವ ʼಕಾಂತಾರʼ ಚಲನಚಿತ್ರ ಮಾಡಿದ್ದು ಕೂಡಾ ದಕ್ಷಿಣ ಕನ್ನಡದವರು. ಯಕ್ಷಗಾನ ಕಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದಿದೆ. ಇದಲ್ಲದೇ ತಮ್ಮೆಲ್ಲರ ಆಶೀರ್ವಾದದಿಂದ ದಕ್ಷಿಣ ಕನ್ನಡ ಜಿಲ್ಲೆಯ ನನಗೆ ಮುಖ್ಯಮಂತ್ರಿ ಆಗುವ ಆವಕಾಶವು ಸಿಕ್ಕಿತು ಎಂದರು.
ವಿಶ್ವ ಸಂತೋಷ ಭಾರತ ಸ್ವಾಮೀಜಿ ಮಾತನಾಡಿ, ದಕ್ಷಿಣ ಕನ್ನಡ ಸಂಘದವರು ಸರ್ವಧರ್ಮದವರಿಗೆ ಕರಾವಳಿಯ ಪ್ರಶಸ್ತಿ ಹಾಗೂ ಪ್ರತಿಭಾ ಪುರಸ್ಕಾರ ನೀಡಿರುವುದು ಸಹಬಾಳ್ವೆ ಮುನ್ನುಡಿ ಬರೆಯಲಾಗಿದೆ ಎಂದು ಹೇಳಿದರು.
ಕೋಮುಸೌಹಾರ್ದ ಕದಡುವ ಕಿಡಿಗೇಡಿಗಳು ತಮ್ಮ ತಮ್ಮ ಧರ್ಮದ ಗ್ರಂಥವನ್ನು ಅಧ್ಯಯನ ಮಾಡಬೇಕು. ಶಾಂತಿ ಸಹಬಾಳ್ವೆ ಎಲ್ಲ ಧರ್ಮಗಳ ಮೂಲಾಶಯವಾಗಿದೆ ಎಂದು ಹೇಳಿದರು.
ಬ್ಯಾರೀಸ್ ಗ್ರೂಪ್‌ನ ಅಧ್ಯಕ್ಷ ಸಯ್ಯದ್ ಮೊಹಮ್ಮದ್ ಬ್ಯಾರಿ, ಕುವೈತ್ ಉದ್ಯಮಿ ನಕ್ರೆ ಸತೀಶಚಂದ್ರ ಶೆಟ್ಟಿ, ಎಲಿಯಾಸ್ ಸಾಂಕ್ಟಿಸ್, ಸೌಂದರ್ಯ ಮಂಜಪ್ಪ ಅವರಿಗೆ ಕರಾವಳಿ ರತ್ನ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ ಸಿ ಬಲ್ಲಾಳ್ ಮಾತನಾಡಿ, ಬೆಂಗಳೂರಿನಲ್ಲಿ ಎಲ್ಲರನ್ನು ಒಟ್ಟು ಸೇರಿಸಿಕೊಂಡು ದಕ್ಷಿಣ ಕನ್ನಡಿಗರ ಸಂಘವನ್ನು ಬೆಳೆಸಿಕೊಂಡು ಹೋಗಬೇಕು, ಹಾಗೆಯೇ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದೇವೆ. ಮುಂದಿನ ಪೀಳಿಗೆ ಈ ಸಂಘವನ್ನು ಮುನ್ನಡೆಸಿಕೊಂಡು ಹೋಗಬೇಕೆಂದು ಹೇಳಿದರು.
ಸಾಹಿತಿ, ಚಿಂತಕ ಡಾ.ಕೆ.ಪಿ.ಪುತ್ತೂರಾಯ, ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಹೇಮಾ ಪ್ರಕಾಶ್ ಪ್ರಾರ್ಥಿಸಿದರು. ರಾಧಾ ಕೇಶವ್ ಹೆಬ್ಬಾರ್ ವಂದಿಸಿದರು.
ಪ್ರತಿಯೊಬ್ಬರಿಗೂ ಶಿಕ್ಷಣ ಕಲ್ಪಿಸುವುದು ನಮ್ಮ ಪ್ರಮುಖ ಉದ್ದೇಶವಾಗಿದೆ. ಶಿಕ್ಷಣ ಪಡೆಯುವುದರಿಂದ ಸುಸ್ಥಿರ ಸಮಾಜ ನಿರ್ಮಾಣಕ್ಕೆ ಸಾಧ್ಯವಾಗಲಿದೆ. ಯುವ ಸಮೂಹ ಉನ್ನತ ಶಿಕ್ಷಣ ಪಡೆಯಲು ಮುಂದಾಗಬೇಕು. ಸಣ್ಣ ವಯಸ್ಸಿನಲ್ಲಿ ನಾನೂ ಕೂಡ ಕಷ್ಟ ಪಟ್ಟಿದ್ದೇನೆ. ಸತತವಾಗಿ ಕಠಿಣ ಪರಿಶ್ರಮಪಟ್ಟರೆ ಯಶಸ್ಸು ಖಂಡಿತ ಸಾಧ್ಯವಿದೆ. ಸಮಾಜದಲ್ಲಿ ಯಾರಿಗೂ ನೋವು, ಮೋಸ ಮಾಡದಂತೆ ಜೀವನ ನಡೆಸಲು ನನ್ನ ತಂದೆಯವರ ಮಾತು ಸ್ಪೂರ್ತಿಯಾಗಿದೆ. ಸಮಾಜಕ್ಕೆ ಸತ್ಕಾರ್ಯ ಮಾಡುವುದೇ ಧರ್ಮ. ಮಾನವೀಯ ಮೌಲ್ಯಗಳನ್ನು ನಮ್ಮಲ್ಲಿ ಬೆಳೆಸಿಕೊಳ್ಳುವುದೇ ನಿಜವಾದ ಧರ್ಮ.
-ಸಯ್ಯದ್ ಮೊಹಮ್ಮದ್ ಬ್ಯಾರಿ, ಬ್ಯಾರೀಸ್ ಗ್ರೂಪ್ ಅಧ್ಯಕ್ಷ