×
Ad

ಬೆಂಗಳೂರು | ರೈಲಿನ ಹಳಿಗೆ ತಳ್ಳಿ ಯುವಕನ ಹತ್ಯೆ ಪ್ರಕರಣ: ಸ್ನೇಹಿತ ಸೆರೆ

Update: 2025-09-08 19:01 IST

ಇಸ್ಮಾಯಿಲ್ ಪಟವೇಗಾರ್ 

ಬೆಂಗಳೂರು, ಸೆ.8 : ಕ್ಷುಲ್ಲಕ ವಿಚಾರಕ್ಕೆ ರೈಲಿನ ಹಳಿಗೆ ತಳ್ಳಿ ಯುವಕನೊಬ್ಬನ್ನು ಹತ್ಯೆಗೈದಿದ್ದ ಪ್ರಕರಣ ಸಂಬಂಧ ಆರೋಪಿಯೊಬ್ಬನ್ನು ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

ವಿಜಯಪುರ ಮೂಲದ ಇಸ್ಮಾಯಿಲ್ ಪಟವೇಗಾರ್ ಮೃತ ಯುವಕ. ಆರೋಪಿ ಪುನೀತ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಇಸ್ಮಾಯಿಲ್ ಹಾಗೂ ಪುನೀತ್ ಇಬ್ಬರೂ ಪರಸ್ಪರ ಸ್ನೇಹಿತರಾಗಿದ್ದು, ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡಿಕೊಂಡು ಒಟ್ಟಿಗೆ ಪಿಜಿಯಲ್ಲಿ ವಾಸವಿದ್ದರು. ಆದರೆ ಪುನೀತ್ ಪ್ರೀತಿಸುತ್ತಿದ್ದ ಯುವತಿಯ ಮೊಬೈಲ್‍ಗೆ ಇಸ್ಮಾಯಿಲ್ ಫೋನ್‌ ಮಾಡಿ ಮಾತನಾಡುತ್ತಿದ್ದ. ಇಸ್ಮಾಯಿಲ್‍ನ ಈ ನಡೆ ಪುನೀತ್‍ನ ಮತ್ತೋರ್ವ ಸ್ನೇಹಿತ ಪ್ರತಾಪ್‍ನ ಸಿಟ್ಟಿಗೆ ಕಾರಣವಾಗಿತ್ತು.

ಅದೇ ವಿಚಾರವಾಗಿ ಇಸ್ಮಾಯಿಲ್‍ನೊಂದಿಗೆ ಪುನೀತ್ ಹಾಗೂ ಪ್ರತಾಪ್‍ಗೆ ಜಗಳವಾಗಿತ್ತು. ಸೆ.7ರಂದು ಬೆಳಗಿನ ಜಾವ 3 ಗಂಟೆ ಸುಮಾರಿಗೆ ದೊಡ್ಡನೆಕ್ಕುಂದಿ ಬಳಿ ಪುನೀತ್ ಹಾಗೂ ಪ್ರತಾಪ್ ಮದ್ಯಪಾನ ಸೇವನೆ ಮಾಡಿ ಕುಳಿತಿದ್ದರು. ಅದೇ ವೇಳೆ ಅಲ್ಲಿಗೆ ಇಸ್ಮಾಯಿಲ್ ಬಂದಾಗ ಮತ್ತೆ ಗಲಾಟೆ ನಡೆದಿತ್ತು ಎನ್ನಲಾಗಿದೆ.

ಈ ವೇಳೆ ಪ್ರತಾಪ್ ಹಾಗೂ ಪುನೀತ್, ಇಸ್ಮಾಯಿಲ್‍ನನ್ನು ಚಲಿಸುತ್ತಿದ್ದ ರೈಲಿನತ್ತ ತಳ್ಳಿದ್ದರು. ನಂತರ ಮೃತದೇಹವನ್ನು ಪುನಃ ರೈಲ್ವೆ ಹಳಿ ಮೇಲಿರಿಸಿ ಪರಾರಿಯಾಗಿದ್ದರು ಎಂದು ರೈಲ್ವೇ ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಆರೋಪಿ ಪುನೀತ್‍ನನ್ನು ಪೊಲೀಸರು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಮತ್ತೋರ್ವ ಆರೋಪಿ ಪ್ರತಾಪ್‍ಗಾಗಿ ಹುಡುಕಾಟ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ರೈಲ್ವೇ ಹಳಿ ಬಳಿ ಮೃತದೇಹ..!

ದೊಡ್ಡನೆಕ್ಕುಂದಿಯ ರೈಲ್ವೆ ಹಳಿ ಬಳಿ ಮೃತದೇಹ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿದಾಗ ಮೃತ ವ್ಯಕ್ತಿ ವಿಜಯಪುರ ಮೂಲಕ ಇಸ್ಮಾಯಿಲ್ ಪಟವೇಗಾರ್ ಎಂಬುದು ಗೊತ್ತಾಗಿತ್ತು. ಬಳಿಕ ಸೆ.7 ರಂದು ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News