ಆರೆಸ್ಸೆಸ್ ತನ್ನ ಮೇಲಿನ ಆರೋಪಗಳನ್ನು ತನಿಖೆ ಮಾಡಲು ಸರಕಾರಕ್ಕೆ ಸಹಕಾರ ನೀಡಲಿ: ರಮೇಶ್ ಬಾಬು
ರಮೇಶ್ ಬಾಬು
ಬೆಂಗಳೂರು: ‘ಆರೆಸ್ಸೆಸ್, ಸಂಘ ಪರಿವಾರದವರು ಯಾವುದೇ ಅಕ್ರಮ ಚಟುವಟಿಕೆಯಲ್ಲಿ ಭಾಗಿಯಾಗದೇ ಇದ್ದಲ್ಲಿ ‘ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುವ’ ಅವಶ್ಯಕತೆ ಇರುವುದಿಲ್ಲ. ಮೊದಲು ಅವರ ಮೇಲಿನ ಆರೋಪಗಳಿಗೆ ತನಿಖೆ ಮಾಡಲು ಸರಕಾರಕ್ಕೆ ಸಹಕಾರ ನೀಡಿ ತಮ್ಮ ಬದ್ಧತೆ ಮೆರೆಯಲಿ’ ಎಂದು ಕೆಪಿಸಿಸಿ ಸಂವಹನ ಮತ್ತು ಮಾಧ್ಯಮ ವಿಭಾಗದ ಅಧ್ಯಕ್ಷ ಹಾಗೂ ಪರಿಷತ್ ಸದಸ್ಯ ರಮೇಶ್ ಬಾಬು ಸವಾಲು ಹಾಕಿದ್ದಾರೆ.
ಸೋಮವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಕಾನೂನುಬಾಹಿರವಾಗಿ ರಾಜ್ಯದಲ್ಲಿ ಯಾರೂ ಅಕ್ರಮ ಚಟುವಟಿಕೆಗಳನ್ನು ಮಾಡಲು ಸಾಧ್ಯವಿರುವುದಿಲ್ಲ. ಅದೇ ಕಾರಣಕ್ಕಾಗಿ ಹಿಂದೆ ದೇಶದಲ್ಲಿ ಸಂಘ ಪರಿವಾರವು ಒಳಗೊಂಡಂತೆ ಅನೇಕ ಸಂಘಟನೆಗಳು ನಿಷೇಧಕ್ಕೆ ಒಳಗಾಗಿರುತ್ತವೆ. ಸಚಿವ ಪ್ರಿಯಾಂಕ್ ಖರ್ಗೆಯವರು ಸಿಎಂಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಕಂಗೆಟ್ಟಿದ್ದಾರೆಂದು ಟೀಕಿಸಿದ್ದಾರೆ.
ಆರೆಸ್ಸೆಸ್ ರಾಷ್ಟ್ರೀಯ ಚಳುವಳಿಯಲ್ಲಿ ಎಂದೂ ಬಾಗಿ ಆಗಿರಲಿಲ್ಲ. ಈ ಸಂಘವು ರಾಷ್ಟ್ರಧ್ವಜ ಮತ್ತು ಸಂವಿಧಾನವನ್ನು ವಿರೋಧ ಮಾಡಿರುವ ಸತ್ಯ ಎಲ್ಲರೂ ತಿಳಿದಿದೆ. ಸ್ವಾತಂತ್ರ್ಯ ಸಂದರ್ಭದಲ್ಲಿ ಬ್ರಿಟಿಷರ ಆಡಳಿತ ಯಂತ್ರದೊಂದಿಗೆ ಶಾಮಿಲಾಗಿ ಭಾರತಕ್ಕೆ ಸಾಂವಿಧಾನಾತ್ಮಕ ಮತ್ತು ಪ್ರಜಾಸತ್ತಾತ್ಮಕ ರಾಷ್ಟ್ರ ನಿರ್ಮಾಣಕ್ಕೆ ತನ್ನ ಅಸಮ್ಮತಿಯನ್ನು ಸೂಚಿಸಿದಂತಹ ಸಂಘ ಪರಿವಾರ, ಇಂದು ಅನೇಕ ಕಾರಣಗಳಿಗೆ ನಿಷೇಧಕ್ಕೆ ಒಳಗಾಗಿರುವುದನ್ನು ನಾವೆಲ್ಲರೂ ತಿಳಿದಿದ್ದೇವೆ ಎಂದು ಅವರು ಉಲ್ಲೇಖಿಸಿದ್ದಾರೆ.
ಸ್ವದೇಶಿ ಮಂತ್ರ ಜಪಿಸುವ ಸಂಘ ಪರಿವಾರದ ನಾಯಕರು, ಮುಸಲೋನಿಯಿಂದ ಕರಿಟೋಪಿ ಮತ್ತು ಸರ್ವಾಧಿಕಾರಿ ಹಿಟ್ಲರ್ ನ ಚಡ್ಡಿಯನ್ನು ತಮ್ಮ ಸಮವಸ್ತ್ರವಾಗಿ ಬಳಸಿದ್ದರು. ಅದೇ ರೀತಿಯಾಗಿ ಅನೇಕ ಪಾಶ್ಚಿಮಾತ್ಯ ನಾಯಕರ ಧ್ಯೇಯೋದ್ದೇಶಗಳನ್ನು ಸಂಘದ ಮೂಲ ಉದ್ದೇಶಗಳಾಗಿ ಬಳಸಿರುತ್ತಾರೆ. ಇದನ್ನು ಬಲ್ಲವರು ಎಲ್ಲರೂ ಪರಿವಾರವನ್ನು ಅನುಮಾನದಿಂದ ನೋಡುವಂತ ಸ್ಥಿತಿ ಇಂದಿಗೂ ಇದೆ ಎಂದು ಅವರು ತಿಳಿಸಿದ್ದಾರೆ.