ಸ್ಪೀಕರ್ ಯು.ಟಿ.ಖಾದರ್ ಗೆ ಬೆಂಗಳೂರು ವಿವಿಯಿಂದ ಗೌರವ ಡಾಕ್ಟರೇಟ್
ಅ.8ರಂದು 60ನೇ ವಾರ್ಷಿಕ ಘಟಿಕೋತ್ಸವದಲ್ಲಿ ಪ್ರದಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ 60ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಸಹಿತ ಮೂವರು ಗೌರವ ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ.
ವಿಧಾನ ಪರಿಷತ್ ಮಾಜಿ ಸದಸ್ಯ ಹಾಗೂ ಸಮಾಜಸೇವಕ ಡಿ. ಮಾದೇಗೌಡ ಹಾಗೂ ಜೆ.ಪಿ. ಅಗ್ರಿ ಜೆನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ನ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕರಾಗಿರುವ ಡಾ.ಟಿ.ಬಿ.ಪ್ರಸನ್ನ ಗೌರವ ಡಾಕ್ಟರೇಟ್ ಪದವಿ ಪಡೆಯುವ ಇನ್ನಿಬ್ಬರು ಸಾಧಕರಾಗಿದ್ದಾರೆ.
ಅ.8ರಂದು ಪೂರ್ವಾಹ್ನ 11:30ಕ್ಕೆ ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಸೆಂಟ್ರಲ್ ಕಾಲೇಜು ಆವರಣದಲ್ಲಿ ಜರುಗುವ ಘಟಿಕೋತ್ಸವದಲ್ಲಿ ಈ ಮೂವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ನಡೆಯಲಿದೆ.
ಬೆಂಗಳೂರು ವಿಶ್ವವಿದ್ಯಾನಿಲಯದ ಕುಲಾಧಿಪತಿಯಾಗಿರುವ ಕರ್ನಾಟಕ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಮಾರಂಭದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಯಾಗಿ ಭಾಗವಹಿಸುವ ಡಿ.ಆರ್.ಡಿ.ಎಲ್. ನ ನಿವೃತ್ತ ನಿರ್ದೇಶಕ, ಪದ್ಮಶ್ರೀ ಪುರಸ್ಕೃತ ಡಾ.ಪ್ರಹ್ಲಾದ ರಾಮರಾವ್ ಘಟಿಕೋತ್ಸವ ಭಾಷಣ ಮಾಡುವರು. ರಾಜ್ಯ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಉಪಸ್ಥಿತರಿರುವರು.
ಯು.ಟಿ.ಖಾದರ್:
ಬಿಎ ಎಲ್.ಎಲ್.ಬಿ ಪದವೀಧರರಾಗಿರುವ ಯು.ಟಿ.ಖಾದರ್ ಅವರು ಮಾಜಿ ಶಾಸಕ ದಿವಂಗತ ಯು.ಟಿ.ಫರೀದ್ ಅವರ ಪುತ್ರ. ಎನ್.ಎಸ್.ಯು.ಐ, ಯುವ ಕಾಂಗ್ರೆಸ್ ಹಾಗೂ ಸೇವಾದಳಗಳ ಮೂಲಕ ಸಾರ್ವಜನಿಕ ಜೀವನ ಪ್ರವೇಶಿಸಿದ ಯು.ಟಿ.ಖಾದರ್ ಅವರು ಈಗ ಮಂಗಳೂರು ಕ್ಷೇತ್ರ ಎಂದಾಗಿರುವ ಉಳ್ಳಾಲ ವಿಧಾನಸಭಾ ಕ್ಷೇತ್ರವನ್ನು ಸತತ ಐದು ಬಾರಿ ಶಾಸಕರಾಗಿ ಪ್ರತಿನಿಧಿಸಿದ್ದಾರೆ. ರಾಜ್ಯ ಸರಕಾರದಲ್ಲಿ ಆರೋಗ್ಯ, ಆಹಾರ, ವಸತಿ ಹಾಗೂ ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಉಪನಾಯಕರಾಗಿದ್ದ ಅವರು 2023ರಿಂದ ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಂಗಳೂರು ರೈಡರ್ಸ್ ಕ್ಲಬ್ ಸ್ಥಾಪಕ ಅಧ್ಯಕ್ಷರಾಗಿರುವ ಯು.ಟಿ.ಖಾದರ್ ವಿದ್ಯಾರ್ಥಿ ಜೀವನದಲ್ಲಿ ರಾಜ್ಯ, ರಾಷ್ಟ್ರೀಯ ಮೋಟರ್ ಕ್ರಾಸ್ ರೇಸ್ ಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ.