×
Ad

ದೇವನಹಳ್ಳಿ ನ್ಯಾಯಾಲಯದಲ್ಲಿ ಮುದ್ರೆಗಳ ಕಳ್ಳತನ: ಪ್ರಕರಣ ದಾಖಲು

Update: 2025-10-25 21:00 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದಲ್ಲಿನ ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‍ಸಿ ನ್ಯಾಯಾಲಯದಲ್ಲಿ ಅತ್ಯವಶ್ಯಕ ಹಾಗೂ ಪ್ರಮುಖ ಮುದ್ರೆಗಳ ಕಳ್ಳತನವಾಗಿದ್ದು, ಈ ಸಂಬಂಧ ದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಕ್ಟೋಬರ್ 17ರಂದು ಘಟನೆ ನಡೆದಿದ್ದು, ನ್ಯಾಯಾಲಯದ ಆಡಳಿತ ಶಾಖೆಯ ಶಿರಸ್ತೇದಾರ ವಿ.ಎಸ್. ಸುದರ್ಶನ್ ಎಂಬವರು ದೇವನಹಳ್ಳಿ ಠಾಣೆಯಲ್ಲಿ ನೀಡಿದ ದೂರನ್ನು ಆಧರಿಸಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಅ.17ರ ಸಂಜೆ 4.30ರ ವೇಳೆಗೆ ನಾನು ಮೂತ್ರ ವಿಸರ್ಜನೆಗೆಂದು ಹೋಗಿದ್ದೆ. ಪುನಃ ವಾಪಸ್ ಬಂದು ಟೇಬಲ್ ಡ್ರಾ ತೆಗೆದಾಗ ಅಲ್ಲಿ ದುಂಡು ಮುದ್ರೆ ಇರಲಿಲ್ಲ. ಅದೇ ಸಮಯದಲ್ಲಿ ನ್ಯಾಯಾಲಯದ ನಕಲು ಶಾಖೆಯಲ್ಲಿ ಕೆಲಸ ಮಾಡುವ ಎಸ್.ಮಲ್ಲಿಕಾರ್ಜುನ್ ಅವರು ಬಂದು ತಮ್ಮ ಶಾಖೆಯಿಂದಲೂ ಸಹ ‘Copying examinar seal’ ಅನ್ನು ಯಾರೋ ಕಳ್ಳತನ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹಾಗಾಗಿ ನ್ಯಾಯಾಲಯದಿಂದ ಎರಡು ಮುದ್ರೆಗಳು ಕಳವಾಗಿವೆ’ ಎಂದು ದೂರಿನಲ್ಲಿ ತಿಳಿಸಲಾಗಿದೆ.

‘Copying examinar sealʼ ಮತ್ತು ದುಂಡು ಮುದ್ರೆ’ ನ್ಯಾಯಾಲಯದ ಅತ್ಯಂತ ಮುಖ್ಯ ಕೆಲಸಗಳಿಗೆ ಉಪಯುಕ್ತವಾಗುತ್ತಿದ್ದ ಮುದ್ರೆಗಳು. ಅದರಲ್ಲೂ ದುಂಡು ಮುದ್ರೆ ನಮ್ಮ ನ್ಯಾಯಾಲಯದ ಅತ್ಯವಶ್ಯಕ ಹಾಗೂ ಪ್ರಮುಖ ಮುದ್ರೆಯಾಗಿದ್ದು, ಈ ಮುದ್ರೆಯಿಲ್ಲದೇ ನ್ಯಾಯಾಲಯದ ದೈನಂದಿನ ಕೆಲಸಗಳು ನಡೆಯುವುದಿಲ್ಲ. ಯಾರೋ ಕಿಡಿಗೇಡಿಗಳು ಮುದ್ರೆಯನ್ನು ದುರುಪಯೋಗ ಮಾಡಿಕೊಳ್ಳುವ ಉದ್ದೇಶದಿಂದ ಕಳವು ಮಾಡಿದ್ದಾರೆ. ಆದ್ದರಿಂದ ಎರಡೂ ಮುದ್ರೆಗಳನ್ನು ಕಳ್ಳತನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News