ಬೆಂಗಳೂರು| ಗಂಡು ಮಗುವಿಗಾಗಿ ಪೀಡಿಸುತ್ತಿದ್ದ ಪತಿ; ಕಿರುಕುಳ ತಾಳಲಾರದೇ ಪತ್ನಿ ಆತ್ಮಹತ್ಯೆ: ಆರೋಪ
ಬೆಂಗಳೂರು: ಗಂಡು ಮಗು ವಿಚಾರಕ್ಕಾಗಿ ದಂಪತಿ ನಡುವೆ ಜಗಳ ನಡೆದು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಪರಿಣಾಮ ಆಕೆಯ ಪತಿಯನ್ನು ಇಲ್ಲಿನ ಮಾದನಾಯಕನಹಳ್ಳಿ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿಸಿದ್ದಾರೆ.
ರೇಣುಕಾ ಆತ್ಮಹತ್ಯೆ ಮಾಡಿಕೊಂಡ ವಿವಾಹಿತೆ. ಮಹಿಳೆಯ ಪೋಷಕರು ನೀಡಿದ ದೂರಿನನ್ವಯ ಮಹಿಳೆಯ ಪತಿ ಶಿವನಂಜಪ್ಪ(42) ಎಂಬಾತನನ್ನು ಬಂಧಿಸಿ ವಿಚಾರಣೆಗೊಳಪಡಿಸಲಾಗಿದೆ. ಭೀಮೇಶ್ವರ ಬಡಾವಣೆಯ ಮನೆಯೊಂದರಲ್ಲಿ ಜುಲೈ 6ರಂದು ರೇಣುಕಾ ಅವರ ಶವಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ರೇಣುಕಾ ಹಾಗೂ ಶಿವನಂಜಪ್ಪ, ಮೂಲತಃ ಮಂಡ್ಯ ಜಿಲ್ಲೆಯವರು. 15 ವರ್ಷಗಳ ಹಿಂದೆ ಇಬ್ಬರು ಪೋಷಕರ ಇಚ್ಚೆಯಂತೆ ಮದುವೆಯಾಗಿದ್ದರು. ವಿವಾಹದ ಬಳಿಕ ಮಾದನಾಯಕನಹಳ್ಳಿಯ ಭೀಮೇಶ್ವರ ಕಾಲೋನಿಯಲ್ಲಿ ವಾಸವಾಗಿದ್ದರು. ರೇಣುಕಾ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬ ಮಾಡಬೇಕೆಂದು ಎಲ್ಲಾ ತಯಾರಿ ನಡೆಸಿದ್ದರು. ಆದರೆ, ಪತಿ ಶಿವನಂಜಪ್ಪ ಜುಲೈ 6ರಂದು ರಾತ್ರಿ ತಮ್ಮ ಮಗಳೊಂದಿಗೆ ಜಗಳವಾಡಿ ಆಕೆಯನ್ನು ಹತ್ಯೆ ಮಾಡಿದ್ದಾರೆ ಎಂದು ಪೋಷಕರು ದೂರಿನಲ್ಲಿ ಆರೋಪಿಸಿದ್ದಾರೆ.
ಮೃತ ರೇಣುಕಾಳಿಗೆ ಮೂವರು ಹೆಣ್ಣು ಮಕ್ಕಳಿದ್ದಾರೆ. ಶಿವನಂಜಪ್ಪ ಗಂಡು ಮಗು ಬೇಕೆ ಬೇಕು ಎಂದು ಪದೇ ಪದೆ ಕಿರುಕುಳ ನೀಡುತ್ತಿದ್ದ ಎಂಬ ಆರೋಪವಿದೆ. ಜುಲೈ 6ರಂದು ಇದೇ ವಿಚಾರಕ್ಕಾಗಿ ಪತ್ನಿಯೊಂದಿಗೆ ಜಗಳವಾಡಿದ್ದಾನೆ. ಗಂಡನ ಹಿಂಸೆ ತಾಳಲಾರದೆ ರೇಣುಕಾ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆಯ ಯೋಚನೆ ಬಂದಾಗ ಅದನ್ನು ನಿಗ್ರಹಿಸಲು ರಾಜ್ಯ ಸರಕಾರದ ಅರೋಗ್ಯ ಇಲಾಖೆಯ ಹೆಲ್ಪ್ ಲೈನ್ 104 ಸಹಾಯ ಮಾಡುತ್ತದೆ. ಅದರ ಜೊತೆಗೆ Tele-MANAS ನ 14416 ಅನ್ನೂ ಸಂಪರ್ಕಿಸಬಹುದು.