ಜನ ಸಾಮಾನ್ಯರ ವೇದಿಕೆಯ ವತಿಯಿಂದ ಯುವ ಪರಿವರ್ತನೆ ಯಾತ್ರೆಗೆ ಚಾಲನೆ
ಬೀದರ್ : ಜನ ಸಾಮಾನ್ಯರ ವೇದಿಕೆಯ ವತಿಯಿಂದ ಹತ್ತು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಇಂದು ಬೀದರ್ ನಲ್ಲಿ ಯುವ ಪರಿವರ್ತನೆ ಯಾತ್ರೆಗೆ ಚಾಲನೆ ನೀಡಲಾಯಿತು.
ನಗರದ ಬೊಮ್ಮಗೊಂಡೇಶ್ವರ್ ವೃತ್ತದ ಬಳಿ ಮಹಾತ್ಮಾ ಗಾಂಧೀಜಿ ಅವರ ಫೋಟೋ ಗೆ ಪೂಜೆ ಹಾಗೂ ಕನ್ನಡ ಬಾವುಟ ಹಾರಿಸುವ ಮೂಲಕ ಯುವ ಪರಿವರ್ತನೆ ಯಾತ್ರೆಗೆ ಚಾಲನೆ ನೀಡಲಾಯಿತು. ಈ ಯಾತ್ರೆಯು ಬೀದರ್, ಕಲ್ಬುರ್ಗಿ, ಯಾದಗಿರಿ, ವಿಜಯಪುರ್, ಬಾಗಲಕೋಟ, ಗದಗ್, ಧಾರವಾಡ್, ಹಾವೇರಿ, ದಾವಣಗೆರೆ, ಚಿತ್ರದುರ್ಗ್ ಹಾಗೂ ತುಮಕೂರ್ ಮೂಲಕ ಬೆಂಗಳೂರು ತಲುಪಲಿದೆ.
ಪ್ರತಿಯೊಂದು ಶಾಲೆಗೆ ಮೂಲಭೂತ ಸೌಕರ್ಯ ಒದಗಿಸಬೇಕು. ಸರ್ಕಾರಿ ವಿಶ್ವವಿದ್ಯಾಲಯಗಳು ಉನ್ನತಿಕರಿಸಬೇಕು. ಯುಪಿಎಸ್ಸಿ ಮಾದರಿಯಲ್ಲಿ ಕೆಪಿಎಸ್ಸಿ ಸುಧಾರಿಸಬೇಕು. ಕೈಗಾರಿಕೆಯಲ್ಲಿ ಉದ್ಯೋಗ ಮೀಸಲಾತಿ ನೀಡಬೇಕು. ಸರ್ಕಾರಿ ಹುದ್ದೆಗಳು ಭರ್ತಿ ಮಾಡಬೇಕು. ತಾಲೂಕಿಗೊಂದು ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಬೇಕು. ವಿದ್ಯುತ್ ವಲಯ ಖಾಸಗಿಕರಣ ಮಾಡುವುದನ್ನು ನಿಲ್ಲಿಸಬೇಕು. ಕೃಷಿ ಉತ್ಪನ್ನಗಳಿಗೆ ಖಾತ್ರಿ ಬೆಲೆ ಒದಗಿಸಬೇಕು. ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಎಸ್ಸಿ, ಎಸ್ಟಿ ಮತ್ತು 2ಎ ವರ್ಗಕ್ಕೆ ಮೀಸಲಾತಿ ಒದಗಿಸಬೇಕು ಎನ್ನುವ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿ ಈ ಯಾತ್ರೆ ಕೈಗೊಳ್ಳಲಾಗಿದೆ ಯಾತ್ರೆಯ ಸಂಚಾಲಕ ಯಲ್ಲಪ್ಪ ಹೆಗಡೆ ಅವರು ಹೇಳಿದ್ದಾರೆ.
ನಮ್ಮ ಯಾತ್ರೆ ಸಾಗುವ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು. ಕೊನೆಗೆ ಅ. 13 ರಂದು ಯಾತ್ರೆಯು ಬೆಂಗಳೂರಿಗೆ ತಲುಪಲಿದೆ. ಅಂದು ಮಧ್ಯಾಹ್ನ 2 ಗಂಟೆಗೆ ಫ್ರೀಡ್ಂ ಪಾರ್ಕ್ ನಲ್ಲಿ ಯಾತ್ರೆಯು ಮುಕ್ತಾಯಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಮಂಡ್ಯದ ಅಭಿ ಗೌಡ, ಕೊಪ್ಪಳದ ಯಮನೂರಪ್ಪ ಹಳ್ಳೇರ್, ಗೊಂಡ ಪರ ಒಕ್ಕೂಟದ ಬೀದರ್ ಜಿಲ್ಲಾಧ್ಯಕ್ಷ ತುಕಾರಾಮ್ ಹಾಗೂ ಗೋಪಾಲ್ ಸೇರಿದಂತೆ ಇತರರು ಇದ್ದರು.