ಬೀದರ್ | ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯಿಂದ 182 ಕೆ.ಜಿ ಮಾದಕ ವಸ್ತು ನಾಶ
ಬೀದರ್ : ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿ ವತಿಯಿಂದ ಸುಮಾರು 53 ಲಕ್ಷ 30 ಸಾವಿರಕ್ಕಿಂತ ಹೆಚ್ಚು ಬೆಲೆ ಬಾಳುವ 182 ಕೆ.ಜಿ ಮಾದಕ ವಸ್ತು ನಾಶಗೊಳಿಸಲಾಗಿದೆ ಎಂದು ಪೊಲೀಸ್ ಅಧಿಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಭಾಲ್ಕಿ ತಾಲ್ಲೂಕಿನ ಧನ್ನೂರ್ ಗ್ರಾಮದಲ್ಲಿರುವ ಇನ್ವೆರೋ ಬಯೋಟಿಕ್ ಜೈವಿಕ ತ್ಯಾಜ್ಯ ವಿಲೇವಾರಿ ಘಟಕದ ಕುಲುಮೆಯಲ್ಲಿ ಗಾಂಜಾ, ಗುಳಿಗೆ ಹಾಗೂ ಸಿರಫ್ ಬಾಟಲ್ ನಾಶಗೊಳಿಸಲಾಗಿದೆ. ಜಿಲ್ಲಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಗಾಂಜಾ ಬೆಳೆಯುತ್ತಿದ್ದ, ಸಾಗಾಣಿಕೆ ಹಾಗೂ ಮಾರಾಟ ಮಾಡುತ್ತಿದ್ದವರ ಮೇಲೆ ದಾಳಿ ನಡೆಸಿ, ಎನ್.ಡಿ.ಪಿ.ಎಸ್. ಕಾಯ್ದೆ ಅಡಿಯಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು. ಈ ಪ್ರಕರಣಗಳಲ್ಲಿ ವಶಪಡಿಸಿಕೊಂಡಿದ್ದ ಗಾಂಜಾ, ಗುಳಿಗೆ ಹಾಗೂ ಸಿರಫ್ ಬಾಟಲ್ ಗಳನ್ನು ಜಿಲ್ಲಾ ಡ್ರಗ್ಸ್ ಡಿಸ್ಪೋಸಲ್ ಕಮಿಟಿಗೆ ಒಪ್ಪಿಸಿ, ನಿಯಮಾನುಸಾರವಾಗಿ ನಾಶಗೊಳಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಡಿವೈಎಸ್ಪಿ ಶಿವಾನಂದ್ ಪವಾಡಶೆಟ್ಟಿ, ಪಿಎಸ್ಐ ಹಣಮಂತಯ್ಯ, ಪಿಎಸ್ಐ ರಾಮಪ್ಪ ಸಾವಳಗಿ ಹಾಗೂ ಡ್ರಗ್ಸ್ ಡಿಸ್ಪೋಸಲ್ ಕಮಿಟಿಯ ಅಧಿಕಾರಿಗಳು ಉಪಸ್ಥಿತರಿದ್ದರು.