ಬೀದರ್ | ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಅರ್ಜಿ ಆಹ್ವಾನ
ಬೀದರ್ : 2025-26 ನೇ ಸಾಲಿನ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆ ಅಡಿಯಲ್ಲಿ ವಿವಿಧ ಘಟಕಗಳಿಗೆ ಸೌಲಭ್ಯ ಪಡೆಯಲು ಜಿಲ್ಲೆಯ ಆಸಕ್ತ ರೈತ ಸಮುದಾಯದಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಸಚೀನ್ ಕೌಠ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಹಾಯಧನದ ವಿವರ: ಹಣ್ಣಿನ ತೋಟಗಳ ಸ್ಥಾಪನೆ, ಹೈಬ್ರಿಡ್ ತರಕಾರಿ ಪ್ರದೇಶ ವಿಸ್ತರಣೆಗೆ, ಹೂವಿನ ತೋಟಗಳ ಸ್ಥಾಪನೆಗೆ, ಸುಗಂಧ ದ್ರವ್ಯ ತೋಟಗಳ ಸ್ಥಾಪನೆಗೆ, ಹಣ್ಣಿನ ತೋಟಗಳ ಪುನಶ್ಚೇತನಕ್ಕೆ, ನೀರು ಸಂಗ್ರಹಣ ಘಟಕಕ್ಕೆ, ಸಂರಕ್ಷಿತ ಬೇಸಾಯ ಕಾರ್ಯಕ್ರಮಕ್ಕೆ, ಯಾಂತ್ರೀಕರಣಕ್ಕೆ, ಕೊಯ್ಲೋತ್ತರ ನಿರ್ವಹಣೆ ಘಟಕ, ತಳ್ಳುವ ಗಾಡಿ ಘಟಕಕ್ಕೆ ಸಹಾಯ ಧನ ನೀಡಲಾಗುತ್ತದೆ.
ಯೋಜನೆಗಳ ವಿವರ : ಹಾಗೂ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ, ಕೇಂದ್ರ ಪುರಷ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ, ತಾಳೆ ಬೆಳೆ ಯೋಜನೆ, ತಾಳೆ ಸಸಿಗಳಿಗೆ ಸಹಾಯಧನ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ, ಕೃಷಿ ಯಾಂತ್ರಿಕರಣ ಉಪ ಅಭಿಯಾನ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ ಅಡಿಯಲ್ಲಿ ಸಹಾಯಧನ ನೀಡಲಾಗುತ್ತದೆ.
ಅರ್ಹತೆಗಳು: ಫಲಾನುಭವಿಗಳು ರೈತರಾಗಿದ್ದು, ಜಮೀನು ಅವರ ಹೆಸರಿನಲ್ಲಿ ಇರಬೇಕು. ಜಂಟಿ ಖಾತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು. ತಂದೆ ಅಥವಾ ತಾಯಿಯ ಹೆಸರಿನಲ್ಲಿ ಜಮೀನಿದ್ದು ಅವರು ಮರಣ ಹೊಂದಿದಲ್ಲಿ ಮಾತ್ರ ಗ್ರಾಮ ಲೆಕ್ಕಿಗರಿಂದ ದೃಢೀಕರಿಸಿದ, ಕುಟುಂಬದ ಇತರೆ ಸದಸ್ಯರಿಂದ ಒಪ್ಪಿಗೆ ಪಡೆದು ತಮ್ಮ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು. ನೀರಿನ ಮೂಲ ಹೊಂದಿರಬೇಕು. ತಾಲ್ಲೂಕು ಕಂದಾಯ ಇಲಾಖೆಯಿಂದ ನೀಡಲಾಗುವ ಇತ್ತೀಚಿನ ಗಣಕಿಕೃತ ಪಹಣಿ ಪ್ರಮಾಣ ಪತ್ರ ಕಡ್ಡಾಯವಾಗಿರುತ್ತದೆ.
ಆಸಕ್ತ ರೈತರು ಅರ್ಜಿಗಳನ್ನು ತಾಲ್ಲೂಕಿನ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗೆ ಜೂ.30 ರ ಸಾಯಂಕಾಲ 5:30 ಗಂಟೆವರೆಗೆ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಹಾಗೂ ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂರ್ಪಕಿಸುವಂತೆ ಅವರು ತಿಳಿಸಿದ್ದಾರೆ.