ಬೀದರ್ | ಮಾ.23 ರಂದು ಬೊಮ್ಮಗೊಂಡೇಶ್ವರ್ ಉತ್ಸವ ಆಚರಣೆ : ಸಂತೋಷ್ ಜೋಳದಾಪಕೆ
ಬೀದರ್ : ಮಾ.23 ರಂದು ನಗರದಲ್ಲಿ ಬೊಮ್ಮಗೊಂಡೇಶ್ವರ್ ಉತ್ಸವ ಆಚರಣೆ ಮಾಡಲಾಗುತ್ತಿದೆ. ಕಾರ್ಯಕ್ರಮವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ರಾಜ್ಯಾಧ್ಯಕ್ಷ ಎಚ್.ಎಂ.ರೇವಣ್ಣ ಅವರು ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಜೋಳದಾಪಕೆ ತಿಳಿಸಿದರು.
ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾ.23 ರ ಮಧ್ಯಾಹ್ನ 12:30 ಗಂಟೆಗೆ ನಗರದ ಪೂಜ್ಯ ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜಿಲ್ಲಾ ಗೊಂಡ ವಿದ್ಯಾರ್ಥಿ ಸಂಘದ ವತಿಯಿಂದ ಮಹಾತ್ಮ ಬೊಮ್ಮಗೊಂಡೇಶ್ವರ ಉತ್ಸವ ಜರುಗಲಿದೆ ಎಂದು ಹೇಳಿದರು.
ಅಂದು ನಗರದ ಬೊಮ್ಮಗೊಂಡೇಶ್ವರ್ ವೃತ್ತದಲ್ಲಿ ಪೂಜೆ ಸಲ್ಲಿಸಲಾಗುವುದು. ವೃತ್ತದಿಂದ ರಂಗಮಂದಿರದ ವರೆಗೆ ಡೊಳ್ಳು ಕುಣಿತ, ಹಲಗೆ ವಾದ್ಯ ಹಾಗೂ ಇತರ ಕಲಾ ತಂಡಗಳ ಜೊತೆಗೆ ಭವ್ಯ ಮೆರವಣಿಗೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ದೇವದುರ್ಗದ ಕಾಗಿನೆಲೆ ಕನಕ ಗುರುಪೀಠದ ಶ್ರೀ ಸಿದ್ಧರಾಮನಂದಪುರಿ ಮಹಾಸ್ವಾಮೀಜಿ ವಹಿಸಲಿದ್ದಾರೆ. ಹಾಗೆಯೇ ಜಿಲ್ಲೆಯ ಎಲ್ಲ ಧರ್ಮದ ಧರ್ಮಗುರುಗಳು ಭಾಗವಹಿಸಲಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಆಗಮಿಸಲಿದ್ದು, ಚಿತ್ರಕಲಾ ಪ್ರದರ್ಶನವನ್ನು ಪೌರಾಡಳಿತ ಸಚಿವ ರಹಿಂಖಾನ್ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಸಾಗರ್ ಖಂಡ್ರೆ, ಶಾಸಕ ಡಾ.ಶೈಲೇಂದ್ರ ಬೆಲ್ದಾಳೆ, ಮಾಜಿ ಸಭಾಪತಿ ರಘುನಾಥ್ ಮಲ್ಕಾಪುರೆ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಅಮೃತರಾವ್ ಚಿಮಕೊಡೆ ಸೇರಿದಂತೆ ಇತರ ಗಣ್ಯವ್ಯಕ್ತಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಹಾಗಾಗಿ ಈ ಕಾರ್ಯಕ್ರಮದಲ್ಲಿ ಜಿಲ್ಲೆಯ ಜನತೆ ಅತೀ ಹೆಚ್ಚು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಲ್ಲಪ್ಪ ಬೆನಕನಹಳ್ಳಿ, ತುಕಾರಾಮ್ ಚಿಮಕೋಡ್, ಮಲ್ಲಿಕಾರ್ಜುನ್ ಮುರ್ಕೆ, ವೈಜಿನಾಥ್ ಎಂ.ಪಿ., ವಿಜಯಕುಮಾರ್ ಬ್ಯಾಲಹಳ್ಳೆ, ಸಿದ್ದು ಬಾವಗೆ ಹಾಗೂ ಲಕ್ಷ್ಮಣ ಉಪ್ಪೆ ಸೇರಿದಂತೆ ಹಲವರು ಹಾಜರಿದ್ದರು.