ಬೀದರ್ | ಜು.2ರಂದು ವಡಗಾಂವ್‌ನಲ್ಲಿ ಬುದ್ದನ ಮೂರ್ತಿ ಅನಾವರಣ : ಮಲ್ಲಪ್ಪ ನೇಳಗೆ
ಬೀದರ್ : ಜು. 2 ರಂದು ಔರಾದ್ ತಾಲ್ಲೂಕಿನ ವಡಗಾಂವ್ ಗ್ರಾಮದಲ್ಲಿ ಭಗವಾನ್ ಬುದ್ಧರ 15 ಅಡಿ ಎತ್ತರದ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಲ್ಲಪ್ಪ ನೇಳಗೆ ಅವರು ತಿಳಿಸಿದರು.
ಇಂದು ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಇದು ಕಲ್ಯಾಣ ಕರ್ನಾಟಕ ಭಾಗದಲ್ಲಿಯೇ ಅತಿ ಎತ್ತರದ ಗೌತಮ ಬುದ್ಧರ ಮೂರ್ತಿಯಾಗಲಿದೆ ಎಂದು ಹೇಳಿದರು.
ಭಗವಾನ್ ಬುದ್ಧರ ತತ್ವ ಮತ್ತು ಸಿದ್ಧಾಂತಗಳಿಂದ ಪ್ರೇರೆಪಿತರಾದ ವಡಗಾಂವ್ ಗ್ರಾಮದ ಕೆಎಎಸ್ ಅಧಿಕಾರಿ ಖಾಜಾ ಖಲಿಲುಲ್ಲಾ ಅವರು ಈ ಬೃಹತ್ ಪ್ರತಿಮೆಯ ರೂವಾರಿಗಳಾಗಿದ್ದಾರೆ. ಇವರು ಮುಸಲ್ಮಾನ್ ಸಮುದಾಯದಲ್ಲಿ ಜನಿಸಿದ್ದರು ಕೂಡಾ ವಿವಿಧತೆಯಲ್ಲಿ ಏಕತೆಯ ತತ್ವವನ್ನು ತಮ್ಮ ನೈಜ ಜೀವನದಲ್ಲಿ ರೂಢಿಸಿಕೊಂಡಿದ್ದಾರೆ. ಇವರು ತಮ್ಮ ಸ್ವಂತ ದುಡ್ಡಿನಲ್ಲಿ ಆಕರ್ಷಕವಾಗಿರುವ ಬುದ್ಧರ ಬೃಹತ್ ಪ್ರತಿಮೆ ನಿರ್ಮಾಣ ಮಾಡಿಸಿದ್ದಾರೆ ಎಂದು ತಿಳಿಸಿದರು.
ವೃತ್ತಿಯಲ್ಲಿ ಅಧಿಕಾರಿಯಾಗಿದ್ದರೂ ಕೂಡಾ ಪ್ರತಿ ವರ್ಷ ತಮ್ಮ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಶೈಕ್ಷಣಿಕ, ಪರಿಸರಿಕ, ಸಾಮಾಜಿಕ, ಧಾರ್ಮಿಕ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಈ ವರ್ಷದ ವಿಶೇಷತೆಯಾಗಿ ಅವರ ಹುಟ್ಟು ಹಬ್ಬದ ದಿನದಂದು ಭಗವಾನ್ ಬುದ್ಧರ ಮೂರ್ತಿ ಅನಾವರಣ ಕಾರ್ಯಕ್ರಮ ನಡೆಯಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಅಂದು ಮಧ್ಯಾಹ್ನ 2 ಗಂಟೆಗೆ ಗ್ರಾಮದ ಅಂಬೇಡ್ಕರ್ ವೃತ್ತದಿಂದ ವೇದಿಕೆ ವರೆಗೆ ಸಮಾಜ ಸುಧಾರಕರ ಭಾವಚಿತ್ರ ಮೆರವಣಿಗೆ ನಡೆಯಲಿದ್ದು, ಸಂಜೆ 4 ಗಂಟೆಗೆ ಬುದ್ಧನ ಮೂರ್ತಿಯು ಭಾಲ್ಕಿಯ ಡಾ.ಬಸವಲಿಂಗ ಪಟ್ಟದೇವರ ಅಮೃತ ಹಸ್ತದಿಂಂದ ಅನಾವರಣ ನಡೆಯಲಿದೆ. ನಂತರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಸಾಯಂಕಾಲ 6 ಗಂಟೆಗೆ ಖಾಜಾ ಖಲಿಲುಲ್ಲಾ ಅವರ ಹುಟ್ಟುಹಬ್ಬ ಆಚರಣೆ ನಡಿಯಲಿದೆ ಎಂದು ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆಣದೂರಿನ ಭಂತೇ ಜ್ಞಾನಸಾಗರ್, ಭಂತೇ ಸಂಘಸೇವಕ, ಮುಖಂಡರಾದ ಶಿವಕುಮಾರ್ ಪಾಟೀಲ್, ರವಿಂದ್ರ ದೊಡ್ಡೆ, ಓಂಕಾರ ಮೇತ್ರೆ, ರಾಜಕುಮಾರ್ ಅಡಕೆ, ಪ್ರಣಿತ್ ಅಗನೂರೆ, ನಾಗೇಶ್ ವೀರಬಶೆಟ್ಟಿ, ಅಶೋಕ್ ಅಡಕೆ ಹಾಗೂ ಪಂಡರಿ ಸೊಪರೆ ಸೇರಿದಂತೆ ಇತರರು ಇದ್ದರು.