×
Ad

ಬೀದರ್ | ಡಿಸಿಸಿ ಬ್ಯಾಂಕ್‌ನಿಂದ ರೈತರಿಗೆ ಅನ್ಯಾಯ : ಭಗವಂತ್ ಖೂಬಾ ಆರೋಪ

Update: 2025-06-22 16:12 IST

ಬೀದರ್ : ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ವತಿಯಿಂದ ರೈತರಿಗೆ ಸಾಲ ಸೌಲಭ್ಯ ಸಿಗುತ್ತಿಲ್ಲ. ಇದರಿಂದಾಗಿ ರೈತರು ಕಂಗಾಲಾಗಿದ್ದು, ಸಮಸ್ಯೆಯ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಆರೋಪಿಸಿದ್ದಾರೆ.

ಇಂದು ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ಸಚಿವನಿದ್ದಾಗ ಜಿಲ್ಲೆಗೆ 600 ಕೋಟಿ ರೂ. ಫಸಲ್ ಬಿಮಾ ಪರಿಹಾರ ಹಣ ತಂದಿದ್ದೇನೆ. ಆದರೆ 2023-24 ರಲ್ಲಿ 2 ಲಕ್ಷ 1 ಸಾವಿರ ಜನ ನೊಂದಣಿ ಮಾಡಿಸಿದ್ದು, ಕೇವಲ 12.60 ಕೋಟಿ ರೂ. ಮಾತ್ರ ಪರಿಹಾರ ನೀಡಲಾಗಿದೆ. ಪಕ್ಕದ ಕಲಬುರಗಿ ಜಿಲ್ಲೆಯಲ್ಲಿ 2 ಲಕ್ಷ 4 ಸಾವಿರ ಜನ ನೋಂದಣಿ ಮಾಡಿಸಿದ್ದು, ಅಲ್ಲಿ 656 ಕೋಟಿ ರೂ. ಫಸಲ ಬಿಮಾ ಯೋಜನೆಯ ಪರಿಹಾರ ಹಣ ನೀಡಲಾಗಿದೆ. ಇದು ಜಿಲ್ಲಾ ಉಸ್ತುವಾರಿ ಸಚಿವರಿಗೆ ನಾಚಿಕೆ ತರುವ ವಿಷಯವಾಗಿದೆ ಎಂದು ಗುಡುಗಿದರು.

ಜಿಲ್ಲೆಯಲ್ಲಿ ಒಂದು ಸಾಚಾ ಕಂಪನಿಯಿದೆ. ಈಶ್ವರ್ ಖಂಡ್ರೆ, ಅಮರ್ ಖಂಡ್ರೆ ಮತ್ತು ಸಾಗರ್ ಖಂಡ್ರೆ ಆ ಕಂಪನಿಯ ಸದಸ್ಯರಾಗಿದ್ದಾರೆ. ಆದರೆ ಸೌ ಚುಹೆ ಖಾಕೆ, ಬಿಲ್ಲಿ ಹಜ್ ಕೋ ಗಯಾ ಎನ್ನುವಂತೆ ಈ ಮೂವರ ಹೇಳಿಕೆಗೂ, ನಡವಳಿಕೆಗೂ ಸಂಬಂಧವೇ ಇಲ್ಲ ಎಂದು ಲೇವಡಿ ಮಾಡಿದರು.

ರೈತರ ಹೆಸರು ಹೇಳಿ ರಾಜಕೀಯ ಮಾಡುವ ಸಚಿವರ ಕುಟುಂಬ ರೈತರ ಶೋಷಣೆ ಮಾಡುತ್ತಿದೆ. ಡಿಸಿಸಿ ಬ್ಯಾಂಕಿನಿಂದ ವಿಮಾ ಹಣ ಕಟ್ಟುವುದಿಲ್ಲ ಎಂದು ಅಮರ್ ಖಂಡ್ರೆ ಅವರು ಘೋಷಣೆ ಮಾಡಿದ್ದಾರೆ ಎಂದು ದೂರಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ರಾಜಶೇಖರ್ ನಾಗಮೂರ್ತಿ, ಜ್ಞಾನೇಶ್ವರ್ ಪಾಟೀಲ್, ಶ್ರೀನಿವಾಸ್ ಚೌಧರಿ, ಬಸವರಾಜ್ ಪವಾರ್ ಹಾಗೂ ಶಶಿಧರ್ ಹೊಸಳ್ಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News