ಬೀದರ್ | ಫೆ.7 ರಿಂದ 9ರವರೆಗೆ ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲೆಯಲ್ಲಿ ಶೈಕ್ಷಣಿಕ ಪ್ರದರ್ಶನ : ಶರಣಪ್ಪ ಸಿಕೆನಪುರೆ
ಬೀದರ್ : ವಿದ್ಯಾರ್ಥಿಗಳ ಆಸಕ್ತಿ, ಅಭಿರುಚಿ ಮತ್ತು ಸ್ವತಂತ್ರ ವಿಚಾರಗಳನ್ನು ಅರಿತು, ಮಕ್ಕಳ ಸರ್ವತೋಮುಖ ಬೆಳವಣಿಗೆಯ ದೃಷ್ಟಿಯಿಂದ ಫೆ. 7, 8 ಮತ್ತು 9 ರಂದು ಬೆನಕನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯ ಆವರಣದಲ್ಲಿ ಶೈಕ್ಷಣಿಕ ಪ್ರದರ್ಶನ 2025 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದಿವ್ಯ ಸಂಕಲ್ಪ ಫೌಂಡೇಶನ್ ಅಡಿಯಲ್ಲಿನ ಗ್ಲೋಬಲ್ ಸೈನಿಕ ಅಕಾಡೆಮಿ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ತಿಳಿಸಿದರು.
ಇಂದು ಗ್ಲೋಬಲ್ ಸೈನಿಕ್ ಅಕಾಡೆಮಿ ಶಾಲಾ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರತಿಯೊಬ್ಬರೂ ಸಾಂಪ್ರದಾಯಿಕವಾಗಿ ಶಾಲಾ ವಾರ್ಷಿಕೋತ್ಸವ ಆಚರಣೆ ಮಾಡುತ್ತಾರೆ. ಆದರೆ ನಾವು ಈ ವರ್ಷ ವಿಭಿನ್ನವಾಗಿ ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಪಾಲಕರ, ಶಿಕ್ಷಕರ ಮತ್ತು ಹಿತೈಷಿಗಳ ಸಹಭಾಗಿತ್ವದಲ್ಲಿ ಶೈಕ್ಷಣಿಕ ಪ್ರದರ್ಶನ ಏರ್ಪಡಿಸಿದ್ದೇವೆ. ಇದರಲ್ಲಿ ಮಕ್ಕಳು ತಮ್ಮ ಆಸಕ್ತಿ ಇರುವ ವಿಷಯದ ಮೇಲೆ ಮಾದರಿಗಳನ್ನು ತಯಾರಿ ಮಾಡಿಕೊಂಡು ಅದರ ವಿವರಣೆ ನೀಡುತ್ತಾರೆ. ಇದು ಮಕ್ಕಳ ಜ್ಞಾನಾರ್ಜನೆ, ಸ್ಮರಣೆ ಮತ್ತು ಪ್ರಾಯೋಗಿಕತೆಗೆ ಸ್ಪೂರ್ತಿ ನೀಡುತ್ತದೆ ಎಂದರು.
ಇಲ್ಲಿವರೆಗೆ ನಮ್ಮಲ್ಲಿ ತರಬೇತಿ ಪಡೆದ 471 ಅಭ್ಯರ್ಥಿಗಳು ಭಾರತೀಯ ಸಶಸ್ತ್ರ ಪಡೆ ಮತ್ತು ಅರೆ ಸೈನಿಕ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಸಾಂಪ್ರದಾಯಿಕ ವಾರ್ಷಿಕೋತ್ಸವದ ಬದಲಾಗಿ ಶೈಕ್ಷಣಿಕ ಪ್ರದರ್ಶನ ನಡೆಸಲಾಗುತ್ತಿದೆ. ಇದರ ಮೂಲ ಉದ್ದೇಶ ವಿದ್ಯಾರ್ಥಿಗಳಿಗೆ ತಮ್ಮ ಕಲಿಕೆ ಮತ್ತು ಶೈಕ್ಷಣಿಕ ಸಾಧನೆಗಳನ್ನು ಪ್ರದರ್ಶಿಸಲು ಅವಕಾಶ ಒದಗಿಸುತ್ತದೆ. ಪೋಷಕರಿಗೆ ಮತ್ತು ಸಹವರ್ತಿಗಳಿಗೆ ಮಕ್ಕಳ ಸೃಜನಶೀಲತೆ ಮತ್ತು ಪ್ರಯತ್ನಗಳನ್ನು ತೊಡಗಿಸಿಕೊಳ್ಳಲು ಮತ್ತು ಮೆಚ್ಚಿಸಲು ಅನುಮತಿಸುತ್ತದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಶಾಲೆಯ ಪ್ರಾಚಾರ್ಯ ಸಮೋದ್ ಮೋಹನ್ ಅವರು ಮಾತನಾಡಿ, ಈ ಶೈಕ್ಷಣಿಕ ಪ್ರದರ್ಶನದಲ್ಲಿ ಎಲ್ಲಾ ವಿಷಯಗಳು ಒಳಗೊಂಡಂತೆ ವಿವಿಧ ವಿಷಯಗಳ ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಗಿದೆ. ತನಗೆ ಏನು ಬೇಕು, ತಾನು ಯಾವ ವಿಷಯದಲ್ಲಿ ಪರಿಪಕ್ವ ಆಗಿದ್ದೇನೆ ಎಂಬುದನ್ನು ಮಕ್ಕಳು ತನ್ನನ್ನು ತಾನು ಅರಿಯಲು ಇದು ಸಹಕಾರಿಯಾಗಿದೆ. ಮಕ್ಕಳಲ್ಲಿ ಆತ್ಮವಿಶ್ವಾಸ, ಜವಾಬ್ದಾರಿತನ ಮತ್ತು ಸಾಮರ್ಥ್ಯದ ಅರಿವು ಮೂಡಿಸುವುದರ ಜೊತೆಗೆ ಸಮಾಜ ಮತ್ತು ರಾಷ್ಟ್ರಕ್ಕೆ ವಿನೂತನ ಕೊಡುಗೆ ನೀಡಲು ನಮ್ಮ ಅಕಾಡೆಮಿ ಸಜ್ಜಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಲೆಯ ನಿರ್ದೇಶಕ ರಮೇಶ್ ಪಾಟೀಲ್, ಹಾವಶೆಟ್ಟಿ ಪಾಟೀಲ್, ಶೈಕ್ಷಣಿಕ ಪ್ರದರ್ಶನದ ಸಂಯೋಜಕಿಯರಾದ ಶಾಲು ಚೌಧರಿ, ಅಮನ್ಪ್ರೀತ್ ಬೇದಿ ಹಾಗೂ ಶಾಲಾ ಸಿಬ್ಬಂದಿಗಳಾದ ಜ್ಯೋತಿ ರಾಗಾ, ಹರ್ಷವರ್ಧನ್ ಸ್ವಾಮಿ, ಗೀತಾ ಉಪ್ಪಿನ್ ಸೇರಿದಂತೆ ಹಲವರು ಭಾಗವಹಿಸಿದ್ದರು.