ಬೀದರ್ | ಜೇನಿಗೆ ರೋಗ ಗುಣಪಡಿಸುವಂತಹ ಶಕ್ತಿ ಇದೆ : ಡಾ.ಎಸ್.ವಿ.ಪಾಟೀಲ್
ಬೀದರ್ : ಜೇನಿನಲ್ಲಿ ಅನೇಕ ಔಷಧೀಯ ಗುಣಗಳಿದ್ದು, ಅದು ರೋಗಗಳು ಗುಣಪಡಿಸುವಂತಹ ಶಕ್ತಿಇದೆ ಎಂದು ಬೀದರ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಇಂದು ತೋಟಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯ ಬಾಗಲಕೋಟೆ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕ ಮತ್ತು ಬೀದರ್‌ನ ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಬೀದರ್‌ನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ʼವಿಶ್ವ ಜೇನು ದಿನ ಕಾರ್ಯಕ್ರಮʼ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವರಿಗೆ ಜೇನು ಒಂದು ದೇವರು ನೀಡಿರುವಂತಹ ಅಮೂಲ್ಯ ವರದಾನವಾಗಿದೆ. ವಿಶ್ವ ಜೇನು ನೊಣ ದಿನವು ಜೇನು ನೊಣ ಉತ್ಸಾಹಿಗಳು, ಜೇನು ಸಾಕಣೆ ಸಂಘಗಳು ಮತ್ತು ಕ್ಲಬ್‌ಗಳು ಮತ್ತು ಜೇನು ಸಾಕಣೆದಾರರು ಜೇನು ನೊಣವನ್ನು ಆಚರಿಸುವ ಜಾಗೃತಿ ದಿನವಾಗಿದೆ. ನಮ್ಮ ದೈನಂದಿನ ಜೀವನಕ್ಕೆ ಜೇನುನೊಣಗಳು ನೀಡುವ ಕೊಡುಗೆ ಗುರುತಿಸುವ ದಿನ ಇದಾಗಿದೆ. ಜೊತೆಗೆ ಜೇನಿನ ಪ್ರಮುಖ ಪ್ರಭೇದವನ್ನು ರಕ್ಷಿಸಲು ನಾವು ತೆಗೆದುಕೊಳ್ಳಬಹುದಾದ ವಿವಿಧ ಹಂತಗಳ ಬಗ್ಗೆ ಕಲಿಯಲು ಈ ದಿನ ಸ್ಫೂರ್ತಿಯಾಗಿದೆ. ಹೆಚ್ಚು ಹೆಚ್ಚು ರೈತರನ್ನು ಜೇನು ಕೃಷಿ ಕೈಗೊಳ್ಳಲು ಉತ್ತೇಜಿಸಬೇಕು ಎಂದು ಅವರು ತಿಳಿಸಿದರು.
ಬಾಗಲಕೋಟೆ ಪ್ರಾಧ್ಯಪಕ ಡಾ.ಮೊಹಮ್ಮದ್ ಫಾರೂಕ್ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಶ್ವ ಜೇನು ದಿನ ಆಚರಣೆ ಅಂಗವಾಗಿ ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದಡಿಯಲ್ಲಿ ಕೀಟಶಾಸ್ತ್ರ ವಿಭಾಗದಿಂದ ಜೇನು ಕೃಷಿಗೆ ಬಳಸುವ ಉಪಕರಣಗಳು ಹಾಗೂ ಸಮಗ್ರ ತಾಂತ್ರಿಕ ಮಾಹಿತಿಯನ್ನೊಳಗೊಂಡ ಭಿತ್ತಿಚಿತ್ರಗಳ ವಸ್ತು ಪ್ರದರ್ಶನ ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾಧ್ಯಾಪಕ (ಹಣ್ಣು ವಿಜ್ಞಾನ) ಡಾ.ಪ್ರವೀಣ ಜೋಳಗೀಕರ್, ಸಹಾಯಕ ಪ್ರಾಧ್ಯಾಪಕ (ಕೀಟಶಾಸ್ತ್ರ) ಡಾ.ಪ್ರಶಾಂತ್, ಡಾ.ಅಬ್ದುಲ್ ಕರೀಮ್ ಎಂ., ತೋಟಗಾರಿಕೆ ಶಿಕ್ಷಣ ಘಟಕದ ವಿಸ್ತರಣಾ ಮುಂದಾಳು ಡಾ. ವಿ.ಪಿ. ಸಿಂಗ್ ಹಾಗೂ ಜಿಲ್ಲೆಯ ರೈತರು, ತೋಟಗಾರಿಕೆ ಮಹಾವಿದ್ಯಾಲಯದ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.