ಬೀದರ್ | ಅಕ್ರಮ ತಂಬಾಕು ಸಾಗಾಟ : ನಾಲ್ವರ ವಿರುದ್ದ ಪ್ರಕರಣ ದಾಖಲು
ಬೀದರ್ : ಮಂಠಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ರಾಷ್ಟ್ರೀಯ ಹೆದ್ದಾರಿ 65ರ ಮೂಲಕ ಹೈದರಾಬಾದ್ ನಿಂದ ಮುಂಬೈಗೆ ಅನಧಿಕೃತವಾಗಿ ಸಾಗಾಟ ಮಾಡುತ್ತಿದ್ದ ಅಕ್ರಮ ತಂಬಾಕನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರದಂದು ಬಸ್ಸಿನಲ್ಲಿ ಸಾಗಾಟ ಮಾಡುತ್ತಿದ್ದ ಒಟ್ಟು 2 ಲಕ್ಷ 50 ಸಾವಿರ ರೂ. ಮೌಲ್ಯದ ತುಳಸಿ ಮತ್ತು ಬಾಬಾ ತಂಬಾಕಿನ 20,600 ಸಣ್ಣ ಪುಡಿಗಳು ಹಾಗೂ ಬಸ್ಸು ಅನ್ನು ಜಪ್ತಿ ಮಾಡಿ, 4 ಜನರ ವಿರುದ್ಧ ಪ್ರಕರಣ ದಾಖಲು ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಪಿಎಸ್ ಪ್ರದೀಪ್ ಗುಂಟಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಚಂದ್ರಕಾಂತ್ ಪೂಜಾರಿ ಅವರ ನಿರ್ದೇಶನದಂತೆ ಹಾಗೂ ಹುಮನಾಬಾದ್ ಪೊಲೀಸ್ ಉಪಾಧೀಕ್ಷಕ ಜೆ.ಎಸ್ ನ್ಯಾಮಗೌಡರ್ ಅವರ ಮಾರ್ಗದರ್ಶನದಲ್ಲಿ ಮಂಠಾಳ ಪೊಲೀಸ್ ಠಾಣೆಯ ಪಿ.ಎಸ್.ಐ ಸುವರ್ಣ ಅವರು ಇಬ್ಬರು ಪಂಚರ ಜೊತೆ ಪೊಲೀಸ್ ಸಿಬ್ಬಂದಿಯಾದ ಮಲ್ಲಿಕಾರ್ಜುನ್, ಪ್ರಕಾಶ್, ಅನಿಲ್, ಶಿವರುದ್ರ, ಶಿವಲಿಂಗ್ ಅವರು ಬಸ್ಸಿನ ಡಿಕ್ಕಿ ಪರಿಶೀಲನೆ ನಡೆಸಿ, ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.
ಈ ಘಟನೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದ್ದು, ಇನ್ನೊಬ್ಬ ಆರೋಪಿಯನ್ನು ಬಂಧಿಸಲಾಗುವುದು ಎಂದು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.