ಬೀದರ್ | ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲು ನೂತನ ಬಸ್ ಲೋಕಾರ್ಪಣೆ
ಬೀದರ್ : ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲು ಬಸ್ ಸೌಲಭ್ಯಕ್ಕೆ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ, ಪೌರಾಡಳಿತ ಹಾಗೂ ಹಜ್ ಸಚಿವ ರಹೀಮ್ ಖಾನ್ ಅವರು ಲೋಕಾರ್ಪಣೆ ಮಾಡಿದರು.
ನಗರದಲ್ಲಿ ಇಂದು ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಿಲ್ಲೆಯ ವಿವಿಧ ಸ್ಥಳಗಳಿಂದ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಲು ಅನುಕೂಲವಾಗುವಂತೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ ನಿಯಮಿತದ ಸಿ ಎಸ್ ಆರ್ ನಿಧಿ ಅಡಿಯಲ್ಲಿ 30 ಲಕ್ಷ ರೂ. ವೆಚ್ಚದಲ್ಲಿ ಅವರು ಬಸ್ ಸೌಲಭ್ಯಕ್ಕೆ ಚಾಲನೆ ನೀಡಿದರು.
ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಮಾತನಾಡಿ, ಈ ವಿಜ್ಞಾನ ಕೇಂದ್ರವನ್ನು ರಾಷ್ಟ್ರಪತಿಯಾಗಿದ್ದ ಖ್ಯಾತ ವಿಜ್ಞಾನಿ, ಮಿಸೈಲ್ ಮ್ಯಾನ್ ಎಂದೇ ಖ್ಯಾತಿಯಾಗಿರುವ ಡಾ.ಅಬ್ದುಲ್ ಕಲಾಂ ಅವರು ಉದ್ಘಾಟನೆ ಮಾಡಿದ್ದರು. ಅವರು ವಿದ್ಯಾರ್ಥಿಗಳೊಂದಿಗೆ ಸದಾ ಸಂವಾದ ಮಾಡುತ್ತಿದ್ದರು. ವಿದ್ಯಾರ್ಥಿಗಳಿಗೆ ವಿಜ್ಞಾನ, ತಂತ್ರಜ್ಞಾನದಲ್ಲಿ ಹೆಚ್ಚಿನ ಆಸಕ್ತಿ ಮೂಢಿಸುವಲ್ಲಿ ಈ ವಿಜ್ಞಾನ ಕೇಂದ್ರ ಉಪಯೋಗವಾಗಲಿದೆ. ದೇಶದ ಭವಿಷ್ಯ ರೂಪಿಸುವಲ್ಲಿ ವಿದ್ಯಾರ್ಥಿಗಳು ಉನ್ನತ ಜ್ಞಾನ ಸಂಪಾದಿಸಬೇಕು. ವಾಸ್ತವ ಸತ್ಯದ ಅನ್ವೇಷಣೆ ಮಾಡುವುದೇ ವಿಜ್ಞಾನವಾಗಿದೆ. ಅನೇಕ ಗ್ರಾಮೀಣ ವಿದ್ಯಾರ್ಥಿಗಳು ಉನ್ನತ ಸ್ಥಾನ ಪಡೆದು ವ್ಯಕ್ತಿತ್ವ ರೂಪಿಸಿಕೊಂಡಿದ್ದಾರೆ ಎಂದರು.
ವಿದ್ಯಾರ್ಥಿಗಳು ಪರಿಸರ ಪ್ರಕೃತಿ ಸಂರಕ್ಷಣೆಯಲ್ಲಿ ಸಹ ಆಸಕ್ತಿ ಹೆಚ್ಚಿಸಿಕೊಳ್ಳಬೇಕು. ಆಧುನಿಕ ಅಭಿವೃದ್ಧಿಯಿಂದ ಮಾಲಿನ್ಯ ಹೆಚ್ಚುತ್ತಿದೆ. ಈಗಲೇ ಬೀದರ್ ಜಿಲ್ಲೆಯಲ್ಲಿ 33 ಡಿಗ್ರಿ ಉಷ್ಣತೆ ಇದೆ. ಓಝೋನ್ ಪರರ ರಕ್ಷಣೆ ತುಂಬಾ ಮಹತ್ವದ್ದಾಗಿದೆ. ಆದ್ದರಿಂದ ಗಿಡ ಮರಗಳು ಬೆಳೆಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಜಿಲ್ಲಾದಿಕಾರಿ ಶಿಲ್ಪಾ ಶರ್ಮಾ, ನಗರಸಭೆ ಅಧ್ಯಕ್ಷ ಮಹ್ಮದ್ ಗೌಸ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಲೀಂ ಪಾಶಾ, ಜಿಲ್ಲೆಯ ಉಪ ಪ್ರಾದೇಶಿಕ ವಿಜ್ಞಾನ ಕೇಂದ್ರದ ಅಧಿಕಾರಿ ಸಾಯಿನಾಥ್ ನಿಟ್ಟೂರಕರ್ ಹಾಗೂ ಇಲಾಖೆ ಸಿಬ್ಬಂದಿ, ಮಕ್ಕಳು ಸೇರಿದಂತೆ ಇತರರು ಉಪಸ್ಥಿತರಿದ್ದರು.