ಬೀದರ್ | ಕುಷ್ಠರೋಗವನ್ನು ಬಹು ಔಷಧ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು : ಮೋಹನದಾಸ್
ಬೀದರ್ : ಕುಷ್ಠರೋಗವನ್ನು ಬಹು ಔಷಧ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಪಡಿಸಬಹುದು. ಶರೀರದಲ್ಲಿ ಮೇಲೆ ಒಂದರಿಂದ ಐದು ಮಚ್ಚೆಗಳ್ಳಿದ್ದರೆ ಆರು ತಿಂಗಳು ಚಿಕಿತ್ಸೆ ಹಾಗೂ ಐದು ಮಚ್ಚೆಗಳಿಂತ ಹೆಚ್ಚು ಮಚ್ಚೆ ಕಂಡು ಬಂದಾಗ ಒಂದು ವರ್ಷದ ಚಿಕಿತ್ಸೆ ನೀಡಲಾಗುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಮೋಹನದಾಸ್ ಅವರು ಹೇಳಿದರು.
ಹುಮನಾಬಾದ್ ನಗರದ ಸರಕಾರಿ ಕನ್ಯಾ ಪ್ರೌಡ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ಪರ್ಶ ಕುಷ್ಠರೋಗ ಅರಿವು ಆಂದೋಲನ ಶಪಥ ಗೃಹಣ ಮತ್ತು ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕುಷ್ಠರೋಗವು ಮುಖ್ಯವಾಗಿ ಚರ್ಮ ಮತ್ತು ನರಗಳಿಗೆ ಸಂಬಂಧಿಸಿದ ಕಾಯಿಲೆಯಾಗಿದೆ. ದೇಹದ ಯಾವುದೇ ಭಾಗದಲ್ಲಿ ಸ್ಪರ್ಶ ಜ್ಞಾವನಿಲ್ಲದ ಮಚ್ಚೆ, ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ, ಮುಖದಲ್ಲಿ ಮತ್ತು ಕಿವಿಗಳ ಮೇಲೆ ಎಣ್ಣೆ ಹಚ್ಚಿದಂತೆ ಹೊಳೆಯುವುದು ಮತ್ತು ಗಂಟುಗಳು ಕಾಣಿಸುವುದು ಇವೆಲ್ಲವೂ ಕುಷ್ಠರೋಗದ ಲಕ್ಷಣಗಳಾಗಿವೆ. ಈ ರೋಗವು ಪ್ರಾರಂಭದ ಹಂತದಲ್ಲಿ ಪತ್ತೆ ಹಚ್ಚಿದರೆ ಬೇಗನೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಶಿವಕುಮಾರ್ ಕಿವಡೆ ಮಾತನಾಡಿ, ಕುಷ್ಠರೋಗವು ಯಾವುದೇ ಶಾಪ ಪಾಪದಿಂದ ಬರುವುದಿಲ್ಲ. ಇದು ಒಂದು ಮೈಕ್ರೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಸಾಂಕ್ರಮಿಕ ರೋಗವಾಗಿದೆ. ದೇಹದ ಯಾವುದೇ ಭಾಗದಲ್ಲಿ ಸ್ವರ್ಶಜ್ಞಾನವಿಲ್ಲದ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆ ಅಥವಾ ಯಾವುದೇ ತರಹದ ಮಚ್ಚೆಗಳು ಕಂಡು ಬಂದಲ್ಲಿ ತಮ್ಮ ಸಮೀಪದ ಪ್ರಾಥಮೀಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಪರಿಕ್ಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿ ರೋಹನ್, ಶಿಕ್ಷಕರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.