×
Ad

ಬೀದರ್ | ನೈತಿಕ ಹೊಣೆ ಹೊತ್ತು ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ : ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ

Update: 2025-01-17 21:27 IST

ಬೀದರ್ : ಎಟಿಎಂಗೆ ಹಣ ತುಂಬುವ ಸಿಬ್ಬಂದಿ ಗಿರಿ ವೆಂಕಟೇಶ್ಗೆ ದುಷ್ಕರ್ಮಿಗಳು ಶೂಟೌಟ್ ಮಾಡಿದ್ದು ನಿಜಕ್ಕೂ ಖಂಡನೀಯ. ಇದರ ನೈತಿಕ ಹೊಣೆ ಹೊತ್ತು ಜಿಲ್ಲಾ ಉಸ್ತುವಾರಿ ಸಚಿವರು ರಾಜೀನಾಮೆ ನೀಡಬೇಕೆಂದು ಮಾಜಿ ಕೇಂದ್ರ ಸಚಿವ ಭಗವಂತ ಖೂಬಾ ಆಗ್ರಹಿಸಿದರು.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬಡವರ ಪಡಿತರ ಅಕ್ಕಿ ಕಾಳಸಂತೆಯಲ್ಲಿ ಮಾರಾಟವಾಗುತ್ತಿದೆ. ಇಸ್ಪಿಟ್ ಅಡ್ಡೆಗಳು ತಲೆ ಎತ್ತಿವೆ. ವೇಶ್ಯಾವಾಟಿಕೆ ಆರಂಭವಾಗಿದೆ. ಇವು ಮಾನವೀಯ ಸಮಾಜ ತಲೆತಗ್ಗಿಸುವ ಕಾರ್ಯವಾಗಿವೆ. ಬಸವಣ್ಣನವರ ಅನುಯಾಯಿ ಎಂದು ಹೇಳಿಕೊಳ್ಳುವ ಉಸ್ತುವಾರಿ ಸಚಿವರು ಈ ಎಲ್ಲಾ ಅನೈತಿಕ ಚಟುವಟಿಕೆಗಳನ್ನು ನಿಲ್ಲಿಸಬೇಕಾಗಿದೆ. ಕೆಲವು ಅಪರಾಧಿಗಳನ್ನು ರಕ್ಷಿಸುತ್ತಿರುವ ಸಚಿವರು ಜನರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು. ಅಧಿಕಾರದ ಅಮಲು, ಅಹಂಕಾರವನ್ನು ಬದಿಗಿಟ್ಟು ಜಿಲ್ಲೆಯ ಜನತೆಯ ಹಿತಾಸಕ್ತಿ ಮತ್ತು ಅಭಿವೃದ್ಧಿ ಕಡೆಗೆ ಹೆಚ್ಚು ಗಮನ ನೀಡಬೇಕು ಎಂದು ಸೂಚಿಸಿದರು.

ಬಿಜೆಪಿಯ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಮಾತನಾಡಿ, ನಗರದಲ್ಲಿ ಹಾಡುಹಗಲೇ ಎಟಿಎಂ ಹಣ ದರೋಡೆ ಮಾಡಿ, ಒಬ್ಬ ವ್ಯಕ್ತಿಯನ್ನು ಕೊಂದು ಪರಾರಿಯಾಗಿದ್ದು ನಿಜಕ್ಕೂ ಜಿಲ್ಲೆಯಲ್ಲಿ ಬೆಚ್ಚಿಬೀಳುವ ಘಟನೆಯಾಗಿದೆ.

ಗೃಹಸಚಿವರು ರಾಜ್ಯದಲ್ಲಿ ಇದ್ದಾರೋ, ಇಲ್ಲವೋ ಎಂಬುದು ಅನುಮಾನದಿಂದ ನೋಡುವಂತಾಗಿದೆ. ಗೃಹ ಇಲಾಖೆ ರಾಜ್ಯದಲ್ಲಿ ಸಂಪೂರ್ಣ ವಿಫಲವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸ್ ಇಲಾಖೆಯು ಅಪರಾಧಗಳನ್ನು ತಡೆಯುವಲ್ಲಿ ಸಂಪೂರ್ಣವಾಗಿದೆ ವಿಫಲವಾಗಿದೆ ಎಂದು ಆರೋಪಿಸಿದರು.

ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಮಾತನಾಡಿ, ನಮ್ಮ ಕ್ಷೇತ್ರದಲ್ಲಿ ಬರುವ ಚಿದ್ರಿಯ ಗಿರಿ ವೆಂಕಟೇಶ್ ಹತ್ಯೆಯಾಗಿದ್ದು ನಿಜಕ್ಕೂ ಖಂಡನೀಯ. ಮೃತರ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ. ಪರಿಹಾರ ನೀಡಬೇಕು. ಕುಟುಂಬದ ಒಬ್ಬ ಸದಸ್ಯರಿಗೆ ಉದ್ಯೋಗ ನೀಡಿ ಸರ್ಕಾರದಿಂದ ಖಾಯಂ ಮಾಡಬೇಕು. ಈ ರೀತಿ ಹಾಡಹಗಲೇ ಹತ್ಯೆ ಮಾಡಿದ್ದರ ಹಿಂದೆ ಯಾರ ಕೈವಾಡವಿದೆ ಎಂಬ ಕುರಿತು ಸಮಗ್ರ ತನಿಖೆಯಾಗಬೇಕು. ಜಿಲ್ಲೆಯಲ್ಲಿ ನಡೆಯುತ್ತಿರುವ ಕಾನೂನು ಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ವಿಭಾಗೀಯ ಸಹ ಪ್ರಭಾರಿ ಈಶ್ವರಸಿಂಗ್ ಠಾಕೂರ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರಾದೆ, ಮಾಜಿ ಬುಡಾ ಅಧ್ಯಕ್ಷ ಬಾಬು ವಾಲಿ, ಬಿಜೆಪಿ ನಗರ ಮಂಡಲ ಅಧ್ಯಕ್ಷ ಶಶಿಧರ್ ಹೊಸಳ್ಳಿ ಹಾಗೂ ಗುರುನಾಥ್ ಜ್ಯಾಂತಿಕರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News