×
Ad

ಬೀದರ್ | ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ದೊಡ್ಡದು : ಪ್ರೊ.ಪರಮೇಶ್ವರ್ ನಾಯ್ಕ್ ಟಿ.

Update: 2025-02-01 18:25 IST

ಬೀದರ್ : ಮಡಿವಾಳ ಮಾಚಿದೇವರು 12ನೇ ಶತಮಾನದ ಅಪ್ರತಿಮ ಶರಣರಾಗಿದ್ದಾರೆ. ಅವರು ಜನರ, ಸಮಾಜದ ಮನೆ ಮನಗಳನ್ನು ಶುಚಿಗೊಳಿಸುವ ಕಾಯಕದಲ್ಲಿ ನಿರತರಾದವರು. ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಬಹು ದೊಡ್ಡದಾಗಿದೆ ಎಂದು ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ. ಪರಮೇಶ್ವರ್ ನಾಯ್ಕ್ ಟಿ. ಅವರು ಹೇಳಿದರು.

ಇಂದು ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ವೀರಗಣಾಚಾರಿ ಮಡಿವಾಳ ಮಾಚಿದೇವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ವಿಶ್ವ ಸಾಹಿತ್ಯಕ್ಕೆ ಶರಣರು ನೀಡಿದ ವಚನ ಸಾಹಿತ್ಯ ಅಪೂರ್ವವಾದದ್ದು. ಇಂತಹ ಅಪೂರ್ವ ವಚನ ಸಾಹಿತ್ಯವನ್ನು ಸಂರಕ್ಷಿಸುವ ಕಾಯಕವನ್ನು ನಿರ್ವಹಿಸಿದವರು ಶರಣ ಮಡಿವಾಳ ಮಾಚಿದೇವರು. ಕಲಿದೇವರ ದೇವಾ ಅಂಕಿತದಲ್ಲಿ ನೂರಾರು ವಚನಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿರುವ ಇವರು ಸಮಾಜದಲ್ಲಿನ ಶೋಷಣೆಯ ವಿರುದ್ಧ ಹೋರಾಡಿ ಸಮಾನತೆಗಾಗಿ ಹಂಬಲಿಸಿದವರು ಎಂದು ತಿಳಿಸಿದರು.

ಅಂದಿನ ಕಾಲದ ವೀರಯೋಧರಾಗಿದ್ದ ಮಡಿವಾಳ ಮಾಚಿದೇವರು, ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ವಚನಗಳ ಕಟ್ಟುಗಳ ರಕ್ಷಣೆಗೈದ ಅಪ್ಪಟ ಶರಣ. ಸುಂದರ ಸಮಾಜದ ಕನಸುಗಾರರಾಗಿದ್ದ ಇವರು ನುಡಿದಂತೆ ನಡೆದರು, ನಡೆದಂತೆ ನುಡಿದರು. ಕಲ್ಯಾಣದ ಅನುಭವ ಮಂಟಪದಲ್ಲಿ ಬಸವಾದಿ ಶರಣರು ಒಂದೆಡೆ ಸೇರಿ ಸಮಾಜಕ್ಕೆ ಅನುಭವಾಮೃತವನ್ನು ನೀಡುತ್ತಿದ್ದರು. ವಚನಗಳ ಕಟ್ಟುಗಳು ರಕ್ಷಿಸುವಲ್ಲಿ ಮಡಿವಾಳ ಮಾಚಿದೇವರ ಪಾತ್ರ ಮಹತ್ವದ್ದಾಗಿದೆ ಎಂದು ನುಡಿದರು.

ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ್ ವಿ.ಗಬಾಡಿ ಹಾಗೂ ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿ ವರ್ಗದವರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News