×
Ad

ಬೀದರ್ | ಸೋಲಾರ್ ಪಾರ್ಕ್ ನಿರ್ಮಿಸಲು 26 ಸಾವಿರ ಎಕರೆ ಭೂಮಿ ನೀಡಲು ರೈತರಿಗೆ ಶಾಸಕ ಪ್ರಭು ಚೌವ್ಹಾಣ್ ಮನವಿ

Update: 2025-03-09 19:20 IST

ಬೀದರ್ : ಔರಾದ್ ನಲ್ಲಿ ಸೋಲಾರ್ ಪಾರ್ಕ್ ನಿರ್ಮಿಸಲು ಒಟ್ಟು 26 ಸಾವಿರ ಎಕರೆ ಭೂಮಿ ಬೇಕಾಗಿದ್ದು, ಇಲ್ಲಿನ ರೈತರು ಆ ಭೂಮಿ ನೀಡಬೇಕು ಎಂದು ಶಾಸಕ ಪ್ರಭು ಚೌವ್ಹಾಣ್ ಅವರು ರೈತರಿಗೆ ಮನವಿ ಮಾಡಿದರು.

ಇಂದು ಚಿಮ್ಮೇಗಾಂವ್ ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ನಿರ್ಮಿಸಲಾಗುತ್ತಿರುವ ಪವರ್ ಗ್ರಿಡ್ ಉಪ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.

ಇವಾಗ 12 ಸಾವಿರ ಎಕರೆ ಹಾಗೂ ನಂತರದಲ್ಲಿ 14 ಸಾವಿರ ಎಕರೆ ಒಟ್ಟು 26 ಸಾವಿರ ಎಕರೆ ಭೂಮಿ ಸೋಲಾರ್ ಪಾರ್ಕ್ ಗೆ ಬೇಕಾಗಿದೆ. ಹಾಗಾಗಿ ರೈತರಲ್ಲಿ ನನ್ನ ವಿನಂತಿ ಏನೆಂದರೆ ಸೋಲಾರ್ ಪಾರ್ಕ್ ನಿರ್ಮಿಸಲು ಭೂಮಿ ನೀಡಬೇಕು ಎಂದು ಅವರು ಮನವಿ ಮಾಡಿದರು.

ಚಿಮ್ಮೆಗಾಂವ್, ಮುರ್ಕಿ, ಮಾಳೆಗಾಂವ್, ಹಂದಿಕೇರಾ, ವಾಗಲಗೇರಾ, ಗಣೇಶಪುರ್ (ಯು), ಚಿಕಲಿ (ಯು), ದಾಬಕಾ, ಹಕನಾಪುರ್, ಖೇರ್ಡಾ, ಭಂಡಾರಕಮಟಾ, ಧೂಪರ್ ವಾಡಿ, ಡೋಂಗರಗಾಂವ್, ಎಂ ಪಿ ಡೋಣಗಾಂವ್, ಇಲ್ಲ್ಯಾಳ್ ಹಾಗೂ ಕರ್ಕ್ಯಾಳ್ ಸೇರಿದಂತೆ ಇನ್ನಿತರ ಹಳ್ಳಿಗಳು ಈಗಾಗಲೇ ಈ ಸೋಲಾರ್ ಪಾರ್ಕ್ ನಿರ್ಮಿಸಲು ಗುರುತಿಸಲಾಗಿದೆ. ಈ ಹಳ್ಳಿಯ ರೈತರು ಸೋಲಾರ್ ಪಾರ್ಕ್ ನಿರ್ಮಿಸಲು ತಮ್ಮ ಭೂಮಿಯನ್ನು ನೀಡಬೇಕು ಎಂದು ಕೇಳಿಕೊಂಡರು.

ರೈತರಿಗೆ ವಿನಂತಿ ಏನೆಂದರೆ ಸೋಲಾರ್ ಪಾರ್ಕ್ ನಿರ್ಮಿಸಲು ತಾವು ತಮ್ಮ ಭೂಮಿ ನೀಡಬೇಕು. ಅದನ್ನು ಡೈರೆಕ್ಟಾಗಿ ನೀಡಬೇಡಿ. ಏಕೆಂದರೆ ಈಗಾಗಲೇ ಹತ್ತು ಜನ ರೈತರಿಗೆ ಮೋಸವಾಗಿದೆ. ಆದ್ದರಿಂದ ಡೊಂಗರಗಾಂವ್ ಹಾಗೂ ಹಂದಿಕೇರಾದಲ್ಲಿ ಕಚೇರಿ ತೆಗೆಯುತ್ತಿದ್ದೇನೆ. ಎಲ್ಲರು ಅಲ್ಲಿಯೇ ಬಂದು ಮಾತುಕತೆ ನಡೆಸೋಣ. ಸೋಲಾರ್ ಪಾರ್ಕಿನವರು ರೈತರಿಗೆ ಮೋಸ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಂದಿದೆ. ಆದರೆ ನಾವು ನಿರ್ಮಾಣ ಮಾಡುತ್ತಿರುವ ಸೋಲಾರ್ ಪಾರ್ಕಿನಲ್ಲಿ ರೈತರಿಗೆ ಅನ್ಯಾಯವಾಗಬಾರದು. ನಾನು ನಿಮ್ಮ ಸೇವೆ ಮಾಡುತ್ತಿದ್ದೇನೆ. ಇದರಿಂದ ಮುಂದಿನ ದಿನಗಳಲ್ಲಿ ರೈತರಿಗೆ ಲಾಭವಾಗಲಿದೆ ಎಂದು ಹೇಳಿದರು.

ಈ ಭೂಮಿಯು 30 ವರ್ಷದವರೆಗೆ ಲೀಜ್ ಗೆ ಇರಲಿದೆ. ಇಷ್ಟೊಂದು ಎಕರೆ ಭೂಮಿ ರೈತರು ನೀಡುತ್ತಿದ್ದಾರೆ ಎಂದರೆ ನಾನು ಅವರಿಗೆ ಮುಂದಿನ ದಿನಗಳಲ್ಲಿ ಲಾಭಗೋಸ್ಕರ ಮಾಡುತ್ತಿದ್ದೇನೆ. ಔರಾದ್ ನ ಬಹಳಷ್ಟು ಜನ ಬೇರೆ ಬೇರೆ ರಾಜ್ಯಗಳಿಗೆ ಕೆಲಸ ಮಾಡಲು ವಲಸೆ ಹೋಗಿದ್ದಾರೆ. ಈ ಸೋಲಾರ್ ಪಾರ್ಕ್ ಆದರೆ ಯಾರೂ ಕೂಡ ವಲಸೆ ಹೋಗುವ ಪರಿಸ್ಥಿತಿ ನಿರ್ಮಾಣ ಆಗುವುದಿಲ್ಲ. ಎಲ್ಲರಿಗೂ ಇಲ್ಲಿಯೇ ಕೆಲಸ ಸಿಗುತ್ತದೆ. ಈ ಸೋಲಾರ್ ಕೆಲಸ ಚೆನ್ನಾಗಿ ಆದರೆ ಮುಂದಿನ ದಿನಗಳಲ್ಲಿ ಔರಾದ್ ಕ್ಷೇತ್ರ ರಾಜ್ಯದಲ್ಲಿಯೇ ನಂಬರ್ ಒನ್ ಆಗುತ್ತದೆ. ಹಾಗಾಗಿ ನೀವೆಲ್ಲರೂ ಇದಕ್ಕೆ ಸಹಕಾರ ಮಾಡಬೇಕು ಎಂದು ತಿಳಿಸಿದರು.

ಈಗಾಗಲೇ ಸೋಲಾರ್ ಪಾರ್ಕ್ ನಿರ್ಮಿಸಲು 10 ರಿಂದ 12 ಕಂಪನಿಗಳು ತಯಾರಾಗಿದ್ದಾವೆ. ನಮ್ಮಿಂದಲೂ ಕೂಡ ಸೋಲಾರ್ ಕಂಪನಿಗೆ ತೊಂದರೆಯಾಗಬಾರದು. ಗ್ರಾಮ ಪಂಚಾಯತ್ ಅಧ್ಯಕ್ಷ, ಕಮಲನಗರ್ ಹಾಗೂ ಔರಾದ್ ತಹಶೀಲ್ದಾರರು ಸೇರಿ ಒಳ್ಳೆಯ ರೀತಿಯಿಂದ ಕೆಲಸ ಮಾಡಬೇಕು ಎಂದು ಸೂಚಿಸಿದರು.

ಈ ಸಂದರ್ಭದಲ್ಲಿ ಔರಾದ(ಬಿ) ತಹಸೀಲ್ದಾರ್ ಮಲಶೆಟ್ಟಿ ಚಿದ್ರೆ, ಕಮಲನಗರ ತಹಸೀಲ್ದಾರ್ ಅಮೀತಕುಮಾರ್ ಕುಲಕರ್ಣಿ, ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋಧಾ ಸಂತೋಷ್, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ಧೊಂಡಿಬಾ ನರೋಟೆ, ಶಿವರಾಜ್ ಅಲ್ಮಾಜೆ, ಪ್ರವೀಣ್ ಕಾರಬಾರಿ, ಬಾಬುರಾವ್ ತೋರ್ಣಾವಾಡಿ, ಸಚಿನ್ ರಾಠೋಡ್, ರಾಜಕುಮಾರ್ ಅಲಬಿದೆ, ಸಚಿನ್ ಬಿರಾದಾರ್ ಹಾಗೂ ಅನೀಲ್ ಬಿರಾದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News