ಬೀದರ್ | ಒಬ್ಬರು ರಕ್ತದಾನ ಮಾಡುವುದರಿಂದ ಮೂವರ ಜೀವ ಕಾಪಾಡಬಹುದು : ಡಾ.ಇಂದ್ರಜಿತ್ ಶಾ
ಬೀದರ್ : ರಕ್ತದಾನವೇ ಶ್ರೇಷ್ಠ ದಾನವಾಗಿದ್ದು, ಒಬ್ಬರು ರಕ್ತದಾನ ಮಾಡುವುದರಿಂದ ಮೂರು ಜನರ ಜೀವವನ್ನು ಕಾಪಾಡಬಹುದಾಗಿದೆ ಎಂದು ಎಸ್ ವಿ ಇ ಟಿ ವೀರಭದ್ರೇಶ್ವರ್ ಹೋಮಿಯೊಪತಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಪ್ರಾಂಶುಪಾಲ ಡಾ.ಇಂದ್ರಜಿತ್ ಶಾ ಅವರು ಹೇಳಿದರು.
ಇಂದು ಹುಮನಾಬಾದ್‌ನ ವೀರಭದ್ರೇಶ್ವರ್ ಹೋಮಿಯೊಪತಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವಿಕೆ ಆಸ್ಪತ್ರೆ, ಹುಮನಾಬಾದ್‌ನ ವೀರಭದ್ರೇಶ್ವರ್ ಹೋಮಿಯೋಪತಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಕ್ತದಾನಿಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಅನೀಲಕುಮಾರ್ ಚಿಂತಾಮಣಿ ಅವರು ಮಾತನಾಡಿ, ಯುವ ಜನತೆಯು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವ ಜೊತೆಗೆ ಎಲ್ಲರಿಗೂ ಅರಿವು ನೀಡಿ, ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಲು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಹುಮನಾಬಾದನ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಮುಜತಾಬ್ ಹುಸೈನ್ ಅವರು ರಕ್ತದಾನ ಮಾಡುವಾಗ ಅನುಸರಿಸಬೇಕಾದ ಮಾರ್ಗಸೂಚಿಯ ಕುರಿತು ವಿವರಿಸಿದರು.
ಶಿಬಿರದಲ್ಲಿ 50 ರಕ್ತದಾನಿಗಳು ರಕ್ತದಾನ ಮಾಡಿದರು. ರಕ್ತದಾನ ಶಿಬಿರ ಆಯೋಜಿಸಿರುವ ಲಕ್ಷ್ಮಿಕಾಂತ್ ಹಿಂದೊಡ್ಡಿ, ಶಾಂತಕುಮಾರ್, ಆಕಾಶ ತಂದೆ ಸಿದ್ರಾಮೇಶ್ವರ್ ಅವರಿಗೆ ಅಭಿನಂದನಾ ಪತ್ರ ನೀಡಿ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಹುಮನಾಬಾದ್‌ನ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಾಗನಾಥ್ ಹುಲಸೂರೆ, ಗೀತಾ ರೆಡ್ಡಿ, ಜಿಲ್ಲಾ ಐಸಿಟಿಸಿ ಮೇಲ್ವಿಚಾರಕ ಸೂರ್ಯಕಾಂತ್, ಡಾ.ಶ್ವೇತ, ಡಾ.ಭಾಗ್ಯಶ್ರೀ ಹಾಗೂ ಬ್ಲಡ್ ಬ್ಯಾಂಕ್ ಕೇಂದ್ರದ ಸಿಬ್ಬಂದಿ, ವೀರಭದ್ರೇಶ್ವರ್ ಹೋಮಿಯೊಪತಿಕ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಉಪನ್ಯಾಸಕರು, ವಿದ್ಯಾರ್ಥಿ, ಸಿಬ್ಬಂದಿ ಸೇರಿದಂತೆ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.