ಬೀದರ್ | ಆಟೋದಲ್ಲಿ ಮರೆತು ಬಿಟ್ಟ ಲ್ಯಾಪ್ ಟಾಪ್ ಅನ್ನು ಎಐ ಕ್ಯಾಮರಾದ ನೆರವಿನಿಂದ ಪತ್ತೆಹಚ್ಚಿದ ಪೊಲೀಸರು
ಬೀದರ್ : ಆಟೋ ರೀಕ್ಷಾ ವಾಹನದಲ್ಲಿ ಮರೆತು ಬಿಟ್ಟು ಹೋದ ಸುಮಾರು 60 ಸಾವಿರ ರೂ. ಬೆಲೆ ಬಾಳುವ ಲ್ಯಾಪ್ ಟಾಪ್ ಅನ್ನು ನಗರದಲ್ಲಿ ಆಳವಡಿಸಿದ ಎಐ (Al) ಕ್ಯಾಮೆರಾದ ನೆರವಿನಿಂದ ಪತ್ತೆ ಮಾಡಿ ಮಾಲಕರಿಗೆ ಹಿಂದಿರುಗಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ನಗರದ ಗುಂಪಾ ಕಾಲೋನಿಯ ನಿವಾಸಿ ಶಿವಕುಮಾರ ಅವರು ಜೂ. 21 ರಂದು ಬೆಳಿಗ್ಗೆ ಬೆಂಗಳೂರಿನಿಂದ ಬೀದರ್ ರೈಲ್ವೆ ನಿಲ್ದಾಣಕ್ಕೆ ಬಂದು, ಆಟೋ ಮೂಲಕ ತಮ್ಮ ಮನೆ ಕಡೆಗೆ ಹೋಗಿದ್ದರು. ಈ ವೇಳೆ ಲ್ಯಾಪ್ ಟಾಪ್ ಇದ್ದ ತಮ್ಮ ಬ್ಯಾಗ್ ಅನ್ನು ಆಟೋದಲ್ಲಿಯೇ ಬಿಟ್ಟು ಹೋಗಿದ್ದಾರೆ. ನಂತರ ಜಿಲ್ಲಾ ಸಂಚಾರಿ ಪೊಲೀಸ್ ಠಾಣೆಗೆ ಭೇಟಿ ನೀಡಿ ಈ ಘಟನೆ ಕುರಿತು ತಿಳಿಸಿದ್ದಾರೆ.
ಘಟನೆ ತಿಳಿದ ಸಂಚಾರಿ ಪೋಲೀಸರು ಇತ್ತಿಚಿಗೆ ಪ್ರಾರಂಭವಾಗಿರುವ ಸಿಸಿಟಿವಿ ಕಮಾಂಡ್ ಮತ್ತು ಕಂಟ್ರೋಲ್ ರೂಮ್ ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ನಗರದಲ್ಲಿ ಆಳವಡಿಸಿದ ಎಐ (Al) ಕ್ಯಾಮರಾದಲ್ಲಿ ದೃಶ್ಯವಳಿಗಳನ್ನು ಪರಿಶೀಲಿಸಲಾಗಿದ್ದು, ಆಟೋ ನಂಬರ್ ಸಹಿತವಾಗಿ ಹಸಿರು ಬಣ್ಣದ ಆಟೋ ಎನ್ನುವುದು ಗೊತ್ತಾಗಿದೆ. ಘಟನೆ ನಡೆದ 2 ಗಂಟೆಯಲ್ಲಿ ಆಟೋ ಅನ್ನು ಪತ್ತೆ ಮಾಡಲಾಗಿದೆ. ಆಟೋ ಮಾಹಿತಿ ಸಂಗ್ರಹಿಸಿ, ಆಟೋ ಚಾಲಕನಿಗೆ ಕಚೇರಿ ಕರೆಸಿದಾಗ ಆಟೋ ಚಾಲಕ ಲ್ಯಾಪ್ ಟಾಪ್ ಹಿಂದಿರುಗಿಸಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.