×
Ad

ಬೀದರ್ | ಆ.19 ರಂದು ʼಕುರಿಗಾಹಿಗಳ ನಡೆ ವಿಧಾನಸೌಧದ ಕಡೆʼ ಪ್ರತಿಭಟನೆ : ಗೋಪಾಲ್ ಎಂ.ಪಿ.ಗಾರಂಪಳ್ಳಿ

Update: 2025-08-14 19:16 IST

ಬೀದರ್ : ಆ.19 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ʼಕುರಿಗಾಹಿಗಳ ನಡೆ ವಿಧಾನಸೌಧದ ಕಡೆʼ ಎಂಬ ಧ್ಯೇಯದೊಂದಿಗೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಹೋರಾಟ ಸಮಿತಿಯ ಅಧ್ಯಕ್ಷ ಗೋಪಾಲ್ ಎಂ.ಪಿ.ಗಾರಂಪಳ್ಳಿ ಅವರು ತಿಳಿಸಿದರು.

ಇಂದು ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಗಟ್ಟಲೆ ಆದಿವಾಸಿ, ಅಲೆಮಾರಿ, ಸಂಚಾರಿ ಬುಡಕಟ್ಟು ಅಸಂಘಟಿತ ಮೂಲನಿವಾಸಿ ಕುರಿಗಾಹಿಗಳ ಹೋರಾಟ ಸಮಿತಿ ಹಾಗೂ ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯಿದೆ ಹೋರಾಟ ಸಮಿತಿ ಇವರ ಸಹಯೋಗದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿರುವ ಶೋಷಿತ ಮೂಲ ನಿವಾಸಿ ಸಮುದಾಯಗಳ ಹಾಗೂ ಹಿಂದುಳಿದ ವರ್ಗಗಳ ಕುರಿಗಾರಿಕೆ ಮೂಲಕ ಕುಟುಂಬದ ಆರ್ಥಿಕ ಪರಿಸ್ಥಿತಿ ನಿಭಾಯಿಸುವ ಸಾಂಪ್ರದಾಯಿಕ ಕುಲಕಸುಬು ಇವರದ್ದು ಆಗಿರುತ್ತದೆ. ಆದರೆ ಇತ್ತೀಚಿಗೆ ಕುರಿಗಾಹಿಗಳ ಮೇಲೆ ಅತ್ಯಾಚಾರ, ಕೊಲೆ, ದರೋಡೆಯಂತಹ ಘಟನೆಗಳು ಜರುಗುತ್ತಿವೆ. ಹಾಗಾಗಿ ಸರಕಾರವು ಕುರಿಗಾರಿಕೆ ಮೇಲೆ ಉಪಜೀವನ ನಡೆಸುತ್ತಿರುವ ಕುರಿಗಾರರ ಮೇಲೆ ಆಗುತ್ತಿರುವಂತ ದೌರ್ಜನಗಳು ತಡೆಯಲು ಸಾಂಪ್ರದಾಯಿಕ ಕುರಿಗಾಯಿಗಳ ಹಿತರಕ್ಷಣಾ ಕಾಯ್ದೆ ರೂಪಿಸಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದರು.

ಆದ ಕಾರಣ ಈ ಪ್ರತಿಭಟನೆಯಲ್ಲಿ ಎಲ್ಲಾ ಕುರಿಗಾಹಿಗಳು, ಶೋಷಿತ ಸಮುದಾಯಗಳ ಮುಖಂಡರು, ರೈತ ಬಾಂಧವರು ಹಾಗೂ ಪ್ರಗತಿಪರ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಅವರು ಕರೆ ಕೊಟ್ಟರು.

ಈ ಸಂದರ್ಭದಲ್ಲಿ ಗೊಂಡಪರ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ತುಕಾರಾಮ್ ಚಿಮಕೋಡ್, ಸಾಂಪ್ರದಾಯಿಕ ಕುರಿಗಾಹಿಗಳ ಹಿತರಕ್ಷಣಾ ಕಾಯಿದೆ ಹೋರಾಟ ಸಮಿತಿ ಪದಾಧಿಕಾರಿ ರವೀಂದ್ರ ಬಳತ್, ಗಿರಿಮಲ್ಲಪ್ಪ ಹಸರಗುಂಡಗಿ, ಈರಪ್ಪಾ ಬೆಳಮಗಿ, ಮಲ್ಲಿಕಾರ್ಜುನ್ ಔರಾಪುರ್, ಗುರುನಾಥ್ ಪೂಜಾರಿ ಹಾಗೂ ಆನಂದ್ ಬನ್ನಳ್ಳಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News