ಬೀದರ್ | ನಶೆಮುಕ್ತ ಸಮಾಜ ನಿರ್ಮಿಸಲು ಸಾರ್ವಜನಿಕರು ಪೊಲೀಸರೊಂದಿಗೆ ಕೈ ಜೋಡಿಸಬೇಕು : ಎಸ್ಪಿ ಪ್ರದೀಪ್ ಗುಂಟಿ
ಬೀದರ್ : ಪ್ರತಿಯೊಬ್ಬರು ಸಾಮಾಜಿಕ ಜವಾಬ್ದಾರಿ ತೆಗೆದುಕೊಂಡಾಗ ಮಾತ್ರ ಸಮಾಜವನ್ನು ನಶೆ ಮುಕ್ತ ಮಾಡಲು ಸಾದ್ಯವಾಗುತ್ತದೆ. ಸಾರ್ವಜನಿಕರು ಪೊಲೀಸ್ ಇಲಾಖೆಗೆ ಸಹಕರಿಸಬೇಕು ಎಂದು ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ತಿಳಿಸಿದರು.
ಇಂದು ನಗರದ ಅಂಬೇಡ್ಕರ್ ವೃತ್ತದ ಬಳಿ ಪೊಲೀಸ್ ಇಲಾಖೆಯಿಂದ ಆಯೋಜಿದ ಅಂತರರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ದಿನಾಚರಣೆ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮಗಳ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ವ್ಯಸನಿ ಹಾಗೂ ಮಾದಕ ವಸ್ತುಗಳ ಮಾರಾಟಗಾರರ ಮಾಹಿತಿ ಇದ್ದರೆ ಪೊಲೀಸ್ ಇಲಾಖೆಗೆ ತಿಳಿಸಬೇಕು. ಅಂಥವರನ್ನು ಜೈಲಿಗೆ ಕಳುಹಿಸುವ ಕೆಲಸ ನಾವು ಮಾಡುತ್ತೇವೆ ಎಂದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜಾಗೃತಿ ಜಾಥಾ ಕಾರ್ಯಕ್ರಮವು ಬೀದರ್ ನಗರದ ವಿಶ್ವಗುರು ಬಸವೇಶ್ವರ್ ವೃತ್ತದಿಂದ ಪ್ರಾರಂಭವಾಗಿ ಭಗತ್ ಸಿಂಗ್ ವೃತ್ತ, ಶಿವಾಜಿ ವೃತ್ತ, ಹರಳಯ್ಯ ವೃತ್ತ ಹಾಗೂ ಬ್ರಿಮ್ಸ್ ಆಸ್ಪತ್ರೆ ಮೂಲಕ ಅಂಬೇಡ್ಕರ್ ವೃತ್ತ ತಲುಪಿತು. ಈ ಸಮಯದಲ್ಲಿ ಡ್ರಗ್ಸ್ ಮಾರಾಟ, ಮಾದಕ ವ್ಯಸನ ಹಾಗೂ ದುಶ್ಚಟಗಳಿಂದ ದೂರವಿರುವ ಬಗ್ಗೆ ಸಂದೇಶ ನೀಡುವ ಬಿತ್ತಿಪತ್ರ ಹಿಡಿದು ನೂರಾರು ವಿದ್ಯಾರ್ಥಿಗಳು ಪೊಲೀಸರೊಂದಿಗೆ ಸಾಗಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಮುಹಮ್ಮದ್ ಗೌಸ್, ಹೆಚ್ಚುವರಿ ಎಸ್ಪಿ ಚಂದ್ರಕಾಂತ್ ಪೂಜಾರಿ, ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್, ಅಬಕಾರಿ ಉಪ ಆಯುಕ್ತ ರವಿಶಂಕರ್ ಎ., ಡಿವೈಎಸ್ಪಿ ಶಿವನಗೌಡ ಪಾಟೀಲ್ ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.