ಬೀದರ್ | ಸ್ತ್ರೀ, ಪುರುಷರಲ್ಲಿ ಸಮಾನತೆ ಸಾರಿದವರು ಸಂತ ಸೇವಾಲಾಲರು : ಪ್ರೊ.ಪರಮೇಶ್ವರ್ ನಾಯ್ಕ್ ಟಿ.
ಬೀದರ್ : ಸಂತ ಸೇವಾಲಾಲರು ಸ್ತ್ರೀ-ಪುರುಷರಲ್ಲಿ ಸಮಾನತೆ ಸಾರಿದ ಸಂತರಾಗಿದ್ದಾರೆ ಎಂದು ಬೀದರ್ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಪರಮೇಶ್ವರ್ ನಾಯ್ಕ್ ಟಿ. ಅವರು ಹೇಳಿದರು.
ಇಂದು ಬೀದರ್ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಂತ ಸೇವಾಲಾಲ್ ಅವರ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿ ಮಾತನಾಡಿದರು.
ರಸಋಷಿ, ಸಾಧುಸಂತ ಹಾಗೂ ಯೋಗಿ ಮಹಾಂತರು ಈ ಭರತ ಭೂಮಿಯ ಪುಣ್ಯದ ಫಲಗಳು. ಅಂತಹ ಸಂತರಲ್ಲಿ ಹಿಂದುಳಿದ ಬಂಜಾರಾ ಸಮುದಾಯದಲ್ಲಿ ಜನಿಸಿದ ಸಂತ ಸೇವಾಲಾಲರೂ ಒಬ್ಬರಾಗಿದ್ದಾರೆ. ಅವರು ತಮ್ಮ ಆದರ್ಶ ಜೀವನಶೈಲಿಯಿಂದಾಗಿ ಜನಮಾನಸದಲ್ಲಿ ಇಂದಿಗೂ ವಿರಾಜಮಾನರಾಗಿದ್ದಾರೆ ಎಂದು ತಿಳಿಸಿದರು.
ಬುಡಕಟ್ಟು ಸಮುದಾಯದಲ್ಲಿನ ಸಮಸ್ಯೆಗಳನ್ನು ಅರಿತ ಸೇವಾಲಾಲರು, ಎಲ್ಲರೂ ಕಲಿಯಿರಿ ಮತ್ತು ಎಲ್ಲರನ್ನೂ ಕಲಿಸಿರಿ ಎಂಬ ಮಹತ್ವದ ಸಂದೇಶ ಸಾರಿದರು. ಆರೋಗ್ಯಪೂರ್ಣ ಸಮಾಜದ ನಿರ್ಮಾಣಕ್ಕಾಗಿ ತಮ್ಮ ಕರ್ತವ್ಯ, ಹಕ್ಕು, ಧರ್ಮ, ಕ್ರಿಯೆಗಳ ಬಗ್ಗೆ ವಿವರವಾಗಿ ಬೋಧಿಸಿದ್ದಾರೆ ಎಂದರು.
ಬೀದರ್ ವಿಶ್ವವಿದ್ಯಾಲಯದ ಆಡಳಿತ ಕುಸಲಚಿವ ಸುರೇಖಾ ಕೆಎಎಸ್ ಮಾತನಾಡಿ, ಸಂತ ಸೇವಾಲಾಲರ ತತ್ವ ಸಂದೇಶಗಳು ಸಾರ್ವಕಾಲಿಕ ಜೀವನಮೌಲ್ಯಗಳ ಆಗರವಾಗಿವೆ. ತಮ್ಮ ಅಧ್ಯಾತ್ಮಿಕ ಅನುಭವದ ಜೊತೆಗೆ ಸಮಾಜದಲ್ಲಿನ ಆಗು ಹೋಗುಗಳ ಬಗ್ಗೆ, ಶ್ರಮಜೀವಿಗಳ, ತುಳಿತಕ್ಕೊಳಗಾದವರ ಧ್ವನಿಯಾಗಿ ಅವರ ಸಂದೇಶಗಳು ಮೂಡಿಬಂದಿವೆ. ಅವರು ಸಮಾಜವನ್ನು ಸನ್ಮಾರ್ಗದೆಡೆಗೆ ಕೊಂಡೊಯ್ಯುವ ಆದರ್ಶ ಮಾರ್ಗದರ್ಶಕರಾಗಿದ್ದರು. ಅವರ ಜೀವನ, ಆದರ್ಶಗಳು ಇಂದಿನ ಜನಾಂಗಕ್ಕೆ ಮಾದರಿಯಾಗಿವೆ. ಯಾವುದೇ ಕಾಲಕ್ಕೂ ಸೇವಾಲಾಲರ ಸಂದೇಶಗಳು ಪ್ರಸ್ತುತವಾಗುತ್ತವೆ ಎಂದು ನುಡಿದರು.
ಈ ಸಂದರ್ಭದಲ್ಲಿ ಬೀದರ್ ವಿಶ್ವವಿದ್ಯಾಲಯದ ವಿಶೇಷಾಧಿಕಾರಿ ಡಾ.ರವೀಂದ್ರನಾಥ್ ವಿ.ಗಬಾಡಿ, ಡಾ.ಶಾಂತಕುಮಾರ ಚಿದ್ರಿ, ಡಾ.ರಾಮಚಂದ್ರ ಗಣಾಪೂರ್, ಉಪನ್ಯಾಸಕರು ಹಾಗೂ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.