ಬೀದರ್ | ಪ್ರತ್ಯೇಕ ಕಳ್ಳತನ ಪ್ರಕರಣ; ಐವರ ಬಂಧನ : ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ
ಬೀದರ್ : ಜಿಲ್ಲೆಯ ವಿವಿಧ ಬೈಕ್ ಕಳ್ಳತನ ಪ್ರಕರಣದಲ್ಲಿ ಐವರು ಆರೋಪಿಗಳನ್ನು ಬಂಧಿಸಿ, 14 ಬೈಕ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಔರಾದ್ (ಬಿ) ಪೊಲೀಸ್ ಠಾಣೆಯಲ್ಲಿ ಸುಮಾರು 95 ಸಾವಿರ ರೂ. ಮೌಲ್ಯದ 2 ಬೈಕ್ ಜಪ್ತಿ ಮಾಡಲಾಗಿದ್ದು, ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಮನ್ನಳ್ಳಿ ಪೊಲೀಸ್ ಠಾಣೆಯಲ್ಲಿ ಕಳ್ಳತನವಾದ ಸುಮಾರು 1 ಲಕ್ಷ ರೂ. ಗೆ ಬೆಲೆಬಾಳುವ 2 ಬೈಕ್ ಗಳು ಜಪ್ತಿ ಮಾಡಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಗದಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಸುಮಾರು 50 ಸಾವಿರ ರೂ. ಮೌಲ್ಯದ 1 ದ್ವಿಚಕ್ರ ವಾಹನ ಜಪ್ತಿ ಮಾಡಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಲಾಗಿದೆ. ಹಾಗೆಯೇ ನೂತನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವಾದ ಸುಮಾರು 3 ಲಕ್ಷ 50 ಸಾವಿರ ರೂ. ಮೌಲ್ಯದ 9 ಬೈಕ್ ಗಳು ಜಪ್ತಿ ಮಾಡಲಾಗಿದ್ದು, ಒರ್ವ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಹೀಗೆ ಒಟ್ಟು 5 ಲಕ್ಷ 95 ಸಾವಿರ ರೂ. ಮೌಲ್ಯದ ಒಟ್ಟು 14 ಬೈಕ್ ಗಳು ಜಪ್ತಿ ಮಾಡಲಾಗಿದ್ದು,ಐವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಅವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದ್ದಾರೆ.