ಬೀದರ್ | ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಿ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ
ಬೀದರ್ : ಮಾ.2 ರಿಂದ 4ರವರೆಗೆ ನಡೆಯುವ 15ನೇ ರಾಜ್ಯಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಯಶಸ್ವಿಯಾಗಿ ಆಯೋಜಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ತಿಳಿಸಿದರು.
ಇಂದು ಜಿಲ್ಲಾದಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬೆಂಗಳೂರಿನ ಕರ್ನಾಟಕ ಜೀವ ವೈವಿದ್ಯ ಮಂಡಳಿ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಪಾರಂಪರಿಕ ವೈದ್ಯ ಪರಿಷತ್ ಹಾಗೂ ಜಿಲ್ಲಾಡಳಿತದ ಸಂಯುಕ್ತಾಶ್ರಯದಲ್ಲಿ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾ.1 ರಂದು ಬೆಳಿಗ್ಗೆ 9 ಗಂಟೆಗೆ ನಗರದ ಸಿದ್ದಾರೂಢ ಮಠದ ಎನ್.ಕೆ.ಜಾಬಶೆಟ್ಟಿ ಆರ್ಯುವೇದಿಕ ಕಾಲೇಜಿನಿಂದ ಡಾ.ಚನ್ನಬಸವ ಪಟ್ಟದ್ದೇವರ ರಂಗಮಂದಿರ ಸಮ್ಮೇಳನ ಜಾಥಾ ಆಯೋಜಿಸಲಾಗುವುದು, ಈ ಜಾಥಾದಲ್ಲಿ ನಗರದ ಎಲ್ಲಾ ಪಾರಂಪರಿಕ ವೈದ್ಯರು, ಆರ್ಯುವೇದಿಕ, ಪಶು ವೈದ್ಯಕೀಯ, ತೋಟಗಾರಿಕೆ ಹಾಗೂ ಪದವಿ ಕಾಲೇಜು ವಿದ್ಯಾರ್ಥಿ ಸೇರಿದಂತೆ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಪರಿಷತ್ತಿನ ಪದಾಧಿಕಾರಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಪದಾಧಿಕಾರಿ ಭಾಗವಹಿಸುವರು ಎಂದು ತಿಳಿಸಿದರು.
ಮಾ.2 ರಂದು ಬೆಳಿಗ್ಗೆ 11 ಗಂಟೆಗೆ ಪ್ರತಾಪ ನಗರದ ಬೆಲ್ದಾಳೆ ಕನ್ವೇಷನ್ ಹಾಲ್ನಲ್ಲಿ 15ನೇ ರಾಜ್ಯ ಮಟ್ಟದ ಪಾರಂಪರಿಕ ವೈದ್ಯ ಸಮ್ಮೇಳನ ಉದ್ಘಾಟನಾ ಸಮಾರಂಭ ಮಾಡಲಾಗುವುದು. ನಂತರ ಸಮ್ಮೇಳನದ ವಿವಿಧ ಗೋಷ್ಠಿಗಳು 3 ದಿನಗಳ ಕಾಲ ಡಾ.ಚನ್ನಬಸವ ಪಟ್ಟದ್ದೇವರು ರಂಗಮಂದಿರದಲ್ಲಿ ಜರುಗಲಿವೆ. ಮಾ.4 ರಂದು ಸಾಯಂಕಾಲ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ಭಾಗವಹಿಸುವ ವೈದ್ಯರಿಗೆ ಪ್ರಮಾಣ ಪತ್ರ, 5 ಜನ ವೈದ್ಯರಿಗೆ ವೈದ್ಯರತ್ನ ಪ್ರಶಸ್ತಿ ಮತ್ತು ಇಬ್ಬರಿಗೆ ವನೌಷಧಿ ಪ್ರಶಸ್ತಿ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಮಾ.3 ಮತ್ತು 4 ರಂದು ಬೆಳಿಗ್ಗೆ 8 ರಿಂದ 9 ಗಂಟೆಯವರೆಗೆ ಪಾರಂಪರಿಕ ವೈದ್ಯರಿಂದ ವಿವಿಧ ರೋಗಗಳ ತಪಾಸಣೆ ಹಾಗೂ ಉಚಿತ ಚಿಕಿತ್ಸೆ ನೀಡಲಾಗುವುದು. ಸಾಯಂಕಾಲ 6 ರಿಂದ 8 ಗಂಟೆವರೆಗೆ ಸಾಂಸ್ಕೃತಿಕ ಸಮಿತಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ. ವಿವಿಧ ಔಷಧ ಕಂಪನಿಗಳಿಂದ 3 ದಿನಗಳ ಕಾಲ ಮಳಿಗೆಗಳು ಸ್ಥಾಪಿಸಲಾಗುವುದು ಎಂದರು.
ಭಾಗವಹಿಸುವ ಎಲ್ಲಾ ಪಾರಂಪರಿಕ ವೈದ್ಯರಿಗೆ 3 ದಿನಗಳ ಕಾಲ ಉಪಹಾರ, ಊಟದ ವ್ಯವಸ್ಥೆ ಮಾಡಲಾಗುವುದು. ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಇನ್ನಿತರ ಕಡೆ ವಸತಿ ವ್ಯವಸ್ಥೆ ಮಾಡಲಾಗುವುದು. ರಸ್ತೆ ಸಾರಿಗೆ ಸಂಸ್ಥೆ ಮತ್ತು ಪ್ರಾದೇಶಿಕ ಸಾರಿಗೆ ಇಲಾಖೆ ವತಿಯಿಂದ ಬಸ್ಸುಗಳ ವ್ಯವಸ್ಥೆ, ನಗರದ ಶಾಲಾ ಕಾಲೇಜುಗಳ ವಾಹನಗಳ ವ್ಯವಸ್ಥೆ ಮಾಡಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ, ಅಧಿಕಾರಿಗಳು ಹಾಗೂ ವಿವಿಧ ಸಂಘ-ಸಂಸ್ಥೆ ಪದಾಧಿಕಾರಿಗಳು ಸೇರಿ ಸಮ್ಮೇಳನದ ಕರಪತ್ರ ಬಿಡುಗಡೆಗೊಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ, ಅಪರ್ ಜಿಲ್ಲಾದಿಕಾರಿ ಶಿವಕುಮಾರ್ ಶೀಲವಂತ್, ಸಾಮಾಜಿಕ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ್, ಪ್ರೋ.ಜಗನ್ನಾಥ್ ಹೆಬ್ಬಾಳೆ, ಶಾಹೀನ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಅಬ್ದುಲ್ ಖದೀರ್, ಪ್ರೋ.ಎಸ್.ವಿ.ಕಲ್ಮಟ್ ಹಾಗೂ ಡಾ.ಪೃಥ್ವಿರಾಜ್ ಎಸ್.ಲಕ್ಕಿ ಸೇರಿದಂತೆ ಸಂಘ ಸಂಸ್ಥೆ ಮುಖ್ಯಸ್ಥರು, ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.