ಬೀದರ್ | ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಯಂತ್ರಗಳಾಗಬಾರದು : ಎಒಸಿ ಪರಾಗಲಾಲ್
ಬೀದರ್ : ವಿದ್ಯಾರ್ಥಿಗಳು ಕೇವಲ ಅಂಕ ಗಳಿಸುವ ಯಂತ್ರಗಳಾಗಬಾರದು. ಅವರಿಗೆ ವ್ಯವಹಾರ ಜ್ಞಾನ, ಕೌಶಲ್ಯ ತರಬೇತಿ, ಸಂಸ್ಕೃತಿ, ಸಂಸ್ಕಾರ, ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಸರ್ವೋತೋಮುಖ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕು ಎಂದು ಬೀದರ್ ವಾಯುಸೇನೆಯ ಎಒಸಿ ಪರಾಗಲಾಲ್ ಅಭಿಪ್ರಾಯಪಟ್ಟರು.
ನಗರದ ಹೊರವಲಯದ ಬೆನಕನಳ್ಳಿ ರಸ್ತೆಯಲ್ಲಿರುವ ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯ, ಅಕಾಡೆಮಿಕ್ ಎಕ್ಸೊ-2025 ಕಾರ್ಯಕ್ರಮದ ಸಮಾರೋಪ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ ವಿತರಿಸಿ ಅವರು ಮಾತನಾಡಿದರು.
ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಗ್ಲೋಬಲ್ ಲೀಡರ್ ಗಳನ್ನಾಗಿ ತಯಾರಿಸುತ್ತಿರುವುದು ಶ್ಲಾಘನಿಯವಾಗಿದೆ. ಈ ಅಕಾಡೆಮಿ ಆರಂಭವಾಗಿನಿಂದ ಇಲ್ಲಿವರೆಗೆ ಅನೇಕ ಪ್ರತಿಭೆಗಳು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ಯುವ ಕೀರ್ತಿ ಈ ಶಾಲೆಯ ಮುಖ್ಯಸ್ಥರಿಗೆ ಸಲ್ಲುತ್ತದೆ ಎಂದರು.
ಗ್ಲೋಬಲ್ ಸೈನಿಕ ಅಕಾಡೆಮಿ ಶಾಲೆಯ ಅಧ್ಯಕ್ಷ ಕರ್ನಲ್ ಶರಣಪ್ಪ ಸಿಕೆನಪುರೆ ಅವರು ಮಾತನಾಡಿ, ಕಳೆದ ಹತ್ತು ವರ್ಷಗಳಿಂದ ಗ್ಲೋಬಲ್ ಸೈನಿಕ ಅಕಾಡೆಮಿಯು ವಿದ್ಯಾರ್ಥಿಗಳನ್ನು ಕೇವಲ ಇಂಜಿನಿಯರ್, ಡಾಕ್ಟರ್ ಗಳನ್ನಾಗಿ ಮಾಡದೆ ದೇಶಸೇವೆ ಮಾಡುವ ಸೈನಿಕ, ಬಾಹ್ಯಾಕಾಶದ ವಿಜ್ಞಾನಿ, ಐಐಟಿ ಕ್ಷೇತ್ರದಲ್ಲಿ ತಂತ್ರಜ್ಞಾನ ಸೇವೆ ಮಾಡುವ ತಂತ್ರಜ್ಞಾನಿ ನಿರ್ಮಿಸುವ ಕಾರ್ಯ ಮಾಡುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಪಬ್ಲಿಕ ಶಾಲೆಯ ಎನ್ ಸಿ ಸಿ ಅಧಿಕಾರಿ ರಫಿಕ್ ತಾಳಿಕೊಟೆ ಅವರು ಮಾತನಾಡಿ, ಪಾಠದ ಜೊತೆಗೆ ವೈವಿಧ್ಯಮಯ ಶಿಕ್ಷಣವನ್ನು ಗ್ರಹಿಸುವ ಮನೋಭಾವ ಬೆಳೆಸಿಕೊಂಡಿರುವ ಈ ಅಕಾಡೆಮಿಯ ವಿದ್ಯಾರ್ಥಿಗಳ ಕೌಶಲ್ಯ ನಿಜಕ್ಕೂ ಮೆಚ್ಚುವಂಥದ್ದು. ಇಲ್ಲಿಯ ಮಕ್ಕಳ ಪ್ರಾಜೆಕ್ಟ್ ಗಳ ಪ್ರದರ್ಶನ ಜಿಲ್ಲೆಯ ಎಲ್ಲಾ ಶೈಕ್ಷಣಿಕ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ವೈಶಾಲಿ ಲಾಲ್, ಗ್ಲೋಬಲ್ ಸೈನಿಕ ಅಕಾಡೆಮಿ ನಿರ್ದೇಶಕಿ ವಿಮಲಾ ಸಿಕೆನಪುರೆ, ಪ್ರಾಚಾರ್ಯ ಸಮೋದ್ ಮೋಹನ್, ಶಿಕ್ಷಕರಾದ ಶೈಲು ಚೌಧರಿ ಅಮನಪ್ರೀತ್, ಮುಖ್ಯಗುರು ಜ್ಯೋತಿ ರಾಗಾ, ಪಿ ಆರ್ ಒ ಕಾರಂಜಿ ಸ್ವಾಮಿ, ಗೀತಾ ಉಪ್ಪಿನ್, ಸಬಾ ಹಾಗೂ ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು, ಪಾಲಕರು ಸೇರಿದಂತೆ ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.