ಬೀದರ್ | ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣಾಧಿಕಾರಿಯನ್ನು ಕೂಡಲೇ ಅಮಾನತು ಮಾಡಲು ಗಗನ್ ಫುಲೆ ಆಗ್ರಹ
ಬೀದರ್ : ಭ್ರಷ್ಟಾಚಾರದಲ್ಲಿ ಮುಳುಗಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಬಿರಾದಾರ್ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರಜಾಪ್ರಭುತ್ವ ಸಂರಕ್ಷಣಾ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಗಗನ್ ಫುಲೆ ಅವರು ಆರೋಪಿಸಿದ್ದಾರೆ.
ಇಂದು ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಬರುವ ಮೆಟ್ರಿಕ್ ಪೂರ್ವ ಹಾಗೂ ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಬಹುದೊಡ್ಡ ಹಗರಣ ನಡೆಯುತ್ತಿದೆ. ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಬಿರಾದಾರ್ ಅವರು ಈ ಹಗರಣದಲ್ಲಿ ಸಂಪೂರ್ಣವಾಗಿ ಭಾಗವಹಿಸಿದ್ದಾರೆ. ಹಾಗಾಗಿ ಉನ್ನತ ಮಟ್ಟದ ತನಿಖೆ ನಡೆಸಿ, ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಿ, ಇವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿರುವ ಹಾಸ್ಟೆಲ್‌ಗಳಲ್ಲಿ ಬಯೋಮೆಟ್ರಿಕ್ ಅಳವಡಿಸಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯ ನೆಪವೊಡ್ಡುವ ಮೂಲಕ ಹಾಸ್ಟೆಲ್ ವಾರ್ಡನ್‌ಗಳು ವಿದ್ಯಾರ್ಥಿಗಳ ಮ್ಯಾನ್ಯುಯಲ್ ಹಾಜರಾತಿ ಪಡೆಯುತ್ತಿದ್ದಾರೆ. ವಿದ್ಯಾರ್ಥಿಗಳು ಗೈರಾಗಿದ್ದರೂ, ಹಾಜರಾತಿಯಲ್ಲಿ ಲೆಕ್ಕ ನೀಡುತ್ತಿದ್ದಾರೆ. ಇದನ್ನು ಪರಿಶೀಲಿಸಿದ ಮೇಲಾಧಿಕಾರಿಗಳು ಕೂಡ ಬಿಲ್ ಬಿಡುಗಡೆ ಮಾಡುತ್ತಿದ್ದಾರೆ. ಹೀಗಾಗಿ ಮ್ಯಾನ್ಯುಯಲ್ ಹಾಜರಾತಿ ಸಂಖ್ಯೆ ದ್ವಿಗುಣಗೊಂಡು ಹಣ ದುರ್ಬಳಕೆಯಾಗುತ್ತಿದೆ. ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಅಕ್ರಮದ ಮಾಹಿತಿ ಇದ್ದರೂ ಕೂಡ ಅವರು ಜಾಣ ಕುರುಡರಾಗಿದ್ದಾರೆ ಎಂದು ಕಿಡಿಕಾರಿದ್ದರು.
ಭಾಲ್ಕಿಯ ಪ್ರಭಾರಿ ತಾಲ್ಲೂಕು ಅಧಿಕಾರಿ ವಿಜಯಮಾಲಾ ಅವರು 4-5 ವರ್ಷದಿಂದ ಭ್ರಷ್ಟಾಚಾರ ಮಾಡುತ್ತಾ ಬಂದಿದ್ದಾರೆ. ಅವರಿಗೆ ಜಿಲ್ಲಾ ಕಲ್ಯಾಣ ಅಧಿಕಾರಿ ಸಂಗೀತಾ ಬಿರಾದಾರ್ ಅವರು ಬೆನ್ನೆಲುಬುಬಾಗಿ ನಿಂತಿದ್ದಾರೆ. ಇವರು ಕೂಡ ಔರಾದ್ ತಾಲ್ಲೂಕಿನ ತಾಲ್ಲೂಕು ಅಧಿಕಾರಿಯಾಗಿದ್ದು, ಭ್ರಷ್ಟಾಚಾರ ಮಾಡುವುದಕ್ಕಾಗಿಯೇ ಇವರು ಪ್ರಭಾರಿಯಾಗಿ ಜಿಲ್ಲಾ ಕಲ್ಯಾಣ ಅಧಿಕಾರಿಯ ಆರ್ಡರ್ ಹಾಕಿಕೊಂಡು ಬಂದಿದ್ದಾರೆ ಅನ್ನಿಸುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಪ್ರಮುಖರಾದ ವೆಂಕಟರಾವ್ ಮೋರೆ, ಕಲ್ಲಪ್ಪ ಹಾಲಿಪುರ್ಗೆ, ದಲಿತ್ ಯೂನಿಟಿ ಮೂವ್ಮೆಂಟ್ ನ ಸಂಸ್ಥಾಪಕ ವಿನೋದ್ ರತ್ನಾಕರ್ ಹಾಗೂ ಜೈವರ್ಧನ್ ಫುಲೆ ಸೇರಿದಂತೆ ಇತರರು ಭಾಗವಹಿಸಿದ್ದರು.