×
Ad

ಬೀದರ್ | ಭಾರತದಲ್ಲಿ ಮತದಾನವು ಮಹತ್ವದ ಪಾತ್ರ ವಹಿಸುತ್ತದೆ : ಪ್ರೊ.ಬಿ.ಎಸ್.ಬಿರಾದಾರ್

Update: 2025-01-24 17:20 IST

ಬೀದರ್ : ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ಹಾಗೂ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತ ದೇಶದ ಸದೃಢ ಅಭಿವೃದ್ಧಿಗಾಗಿ ಹಾಗೂ ಸುಸ್ಥಿರ ಸರಕಾರದ ನಿರ್ಮಾಣಕ್ಕಾಗಿ ಮತದಾನವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಎಸ್.ಬಿರಾದಾರ್ ಅವರು ಅಭಿಪ್ರಾಯಪಟ್ಟರು.

ಇಂದು ಬೀದರ್ ವಿಶ್ವವಿದ್ಯಾಲಯ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಮತದಾರರ ಪ್ರತಿಜ್ಞಾ ವಿಧಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮತದಾನದಲ್ಲಿ ಎಲ್ಲರೂ ಪಾಲ್ಗೊಂಡಾಗ ಮಾತ್ರ ಪ್ರಜಾಪ್ರಭುತ್ವಕ್ಕೆ ಬೆಲೆ ಬರುತ್ತದೆ. ಮತದಾನದಿಂದಾಗಿ ತಮ್ಮ ಸಮರ್ಥ ಪ್ರತಿನಿಧಿಯನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತದೆ. 18 ವರ್ಷ ಮೇಲ್ಪಟ್ಟವರೆಲ್ಲರೂ ಕಡ್ಡಾಯವಾಗಿ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ವಿಶ್ವವಿದ್ಯಾಲಯದ ಆಡಳಿತ ಕುಲಸಚಿವೆ ಸುರೇಖಾ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮತದಾನದ ಜಾಗೃತಿ ಮೂಡಿಸುವುದು ತುರ್ತಾಗಿದೆ. ಎಷ್ಟೋ ಜನ ಯುವಕರು ಜಾಗೃತೆಯ ಕೊರತೆಯಿಂದಾದ ಮತದಾನದ ಹಕ್ಕಿನಿಂದ ವಂಚಿತರಾಗುತ್ತಿದ್ದಾರೆ. ಯುವಕರು ವೋಟರ್ ಹೆಲ್ಪ್ ಲೈನ್ ಆಪ್ ನಲ್ಲಿ ತಾವಾಗಿಯೇ ನೋಂದಣಿ ಮಾಡಿಕೊಳ್ಳಬಹುದು. ವಿದ್ಯಾವಂತರು ಪ್ರತಿಯೊಬ್ಬರನ್ನೂ ಜಾಗೃತಗೊಳಿಸಿ, ಸರ್ವರೂ ಮತದಾನದ ಹಕ್ಕು ಪಡೆಯವಂತೆ ಮಾಡಬೇಕು ಎಂದರು.

ಕಾರ್ಯಕ್ರಮದಲ್ಲಿ ಪರಮೇಶ್ವರ್ ನಾಯಕ್.ಟಿ, ಡಾ.ರವೀಂದ್ರನಾಥ್ ಗಬಾಡಿ ಹಾಗೂ ವಿಶ್ವವಿದ್ಯಾಲಯದ ಶಿಕ್ಷಕ ಶಿಕ್ಷಕೇತರ ಸಿಬ್ಬಂದಿ ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Full View

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News