ಬೀದರ್ | ಸದ್ಭಾವನಾ ಮಂಚ್ ವತಿಯಿಂದ ಕಾಲ್ನಡಿಗೆ ಜಾಥಾ
ಬೀದರ್ : ಸದ್ಭಾವನಾ ಮಂಚ್ ಘಟಕದ ವತಿಯಿಂದ ನಗರದಲ್ಲಿ ಕಾಲ್ನಡಿಗೆ ಜಾಥಾ ನಡೆಯಿತು.
ಜೂ.30ರಂದು ಸದ್ಭಾವನಾ ನಡೆಗೆಯೂ ನಗರದ ಮಹಮ್ಮದ್ ಗವಾನ್ ಮದರಸಾದಿಂದ ಆರಂಭಗೊಂಡು ಚೌಬಾರಾ, ನಯಾ ಕಮಾನ್, ಬಸವೇಶ್ವರ್ ವೃತ್ತ, ಮಹಾವೀರ್ ವೃತ್ತ, ಭಗತ್‍ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ಶಿವಾಜಿ ವೃತ್ತ ಹಾಗೂ ಹರಳಯ್ಯ ವೃತ್ತದ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತಲುಪಿತು.
ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ, ನಮ್ಮ ದೇಶ ಮತ್ತು ರಾಜ್ಯದಲ್ಲಿ ಇತ್ತೀಚಿಗೆ ಧರ್ಮ ಹಾಗೂ ಜಾತಿ ಆಧಾರದಲ್ಲಿ ದ್ವೇಷ, ತಾರತಮ್ಯ, ಕೊಲೆ, ಗುಂಪು ಕೊಲೆ, ಆರ್ಥಿಕ ಬಹಿಷ್ಕಾರ ಹಾಗೂ ಕೋಮು ಗಲಭೆಗಳಂತಹ ಸಾಮಾಜಿಕ ಅನಿಷ್ಟ ಘಟನೆಗಳು ಜರುಗುತ್ತಿವೆ. ಇವು ಸಮಾಜವನ್ನು ನೈತಿಕ ಹಾಗೂ ಸಾಮಾಜಿಕವಾಗಿ ಅಧಪತನಕ್ಕೆ ದಾರಿಮಾಡಿಕೊಡುತ್ತಿವೆ. ಇವುಗಳನ್ನು ತಡೆಯಲು ಸರಕಾರ ಹಾಗೂ ಸಮಾಜದ ಶಾಂತಿಪ್ರೀಯ ನಾಗರಿಕರು ಪ್ರಯತ್ನಿಸಬೇಕಾಗಿದೆ ಎಂದು ಕೋರಲಾಗಿದೆ.
ಸಾಮಾಜಿಕ ಅಶಾಂತಿ ಹಾಗೂ ಕೋಮು ಸೌಹಾರ್ದ ಕೆಡಿಸುವ ಕೆಲವು ರಾಜಕೀಯ ಪಕ್ಷ ಹಾಗೂ ಸಂಘ ಸಂಸ್ಥೆಗಳ ಹೊಣೆಗಾರರು ನೀಡುವ ಬೇಜವಾಬ್ದಾರಿ ಹೇಳಿಕೆಗಳನ್ನು ಕಟ್ಟು ನಿಟ್ಟಾಗಿ ತಡೆಯಲು ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಬೇಕು. ಸಾಮಾಜಿಕ ಜಾಲತಾಣಗಳನ್ನು ಕೋಮು ದ್ವೇಷ ಹರಡಲು ಅತಿ ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಕೋಮು ಸಂಘರ್ಷ ಉಂಟಾಗುತ್ತಿದೆ. ಅಂತಹ ಅಂಶಗಳು ಕಂಡು ಬಂದರೆ ಅಂತವರ ವಿರುದ್ಧ ಪೊಲೀಸ್ ಇಲಾಖೆ ಕ್ರಮ ಜರುಗಿಸಬೇಕು. ಯಾವುದೇ ಅಹಿತಕರ ಘಟನೆಗಳು ಜರುಗಿದಲ್ಲಿ ತಕ್ಷಣವೇ ಎಲ್ಲಾ ಧರ್ಮ ಹಾಗೂ ಸಮುದಾಯಗಳ ಮುಖಂಡರ ಶಾಂತಿ ಸಭೆ ಕರೆದು ಪರಿಸ್ಥಿತಿ ತಿಳಿಗೊಳಿಸಬೇಕು ಎಂದು ತಿಳಿಸಲಾಗಿದೆ.
ಯಾವುದೇ ಧರ್ಮ, ಧರ್ಮಗ್ರಂಥ ಹಾಗೂ ಮಹಾಪುರುಷರನ್ನು ಅವಮಾನಿಸಿ ಮಾತನಾಡುವುದನ್ನು ಕಟ್ಟು ನಿಟ್ಟಾಗಿ ತಡೆಗಟ್ಟಬೇಕು ಎಂದು ಆಗ್ರಹಿಸಲಾಗಿದೆ.
ಆ.20 ರ ಸದ್ಭಾವನಾ ದಿವಸವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ವಿದ್ಯಾರ್ಥಿಗಳಿಗಾಗಿ ಈ ವಿಷಯದ ಮೇಲೆ ನಿಬಂಧ ಹಾಗೂ ಭಾಷಣ ಸ್ಪರ್ಧೆ ಏರ್ಪಡಿಸಿ, ವಿಜೇತರಿಗೆ ಬಹುಮಾನ ನೀಡಬೇಕು. ಹಾಗೆಯೇ ಸದ್ಭಾವನಾ ಓಟವನ್ನು ಏರ್ಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಜಗದ್ಗುರು ಚನ್ನಬಸವಾನಂದ್ ಸ್ವಾಮೀಜಿ, ಮಾತೆ ಸತ್ಯದೇವಿ, ಫಾದರ್ ಕ್ಲೇರಿ ಡಿಸೋಜಾ, ಫಾದರ್ ವಿಲ್ಸನ್ ಫರ್ನಾಂಡೀಸ್, ಭಂತೆ ಜ್ಞಾನಸಾಗರ್, ರಾಜ್ಯ ಕ್ರಿಶ್ಚಿಯನ್ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಸಂಜಯ್ ಜಾಗೀರದಾರ್, ಜಗಜಿತ್ ಸಿಂಗ್, ಶಾಹೀನ್ ಶಿಕ್ಷಣ ಸಂಸ್ಥೆ ಸಮೂಹದ ಅಧ್ಯಕ್ಷ ಡಾ.ಅಬ್ದುಲ್ ಖದೀರ್, ವಿಸ್ಡಮ್ ಕಾಲೇಜಿನ ಅಧ್ಯಕ್ಷ ಮಹಮ್ಮದ್ ಆಸಿಫೊದ್ದೀನ್, ಸದ್ಭಾವನಾ ಮಂಚ್ ಸಂಚಾಲಕ ಗುರುನಾಥ ಗಡ್ಡೆ, ಸಹ ಸಂಚಾಲಕ ಮಹಮ್ಮದ್ ನಿಜಾಮುದ್ದೀನ್, ಪ್ರಮುಖರಾದ ಬಾಬುರಾವ್ ಹೊನ್ನಾ, ವಿಜಯಕುಮಾರ್, ಪಾಸ್ಟರ್ ವಿಜಯಕುಮಾರ ಡೇವಿಡ್, ಮೌಲಾನಾ ತಸದ್ದುಕ್ ನದ್ವಿ, ಮೌಲಾನಾ ಮುಜೀಬುರ್ರಹಮಾನ್, ಖಾಸ್ಮಿ, ಮೌಲಾನಾ ಮೋನಿಸ್ ಕಿರ್ಮಾನಿ, ಮಹಮ್ಮದ್ ಮೌಅಝಮ್, ಶ್ರೀಕಾಂತ್ ಸ್ವಾಮಿ, ಓಂಪ್ರಕಾಶ್ ರೊಟ್ಟೆ, ಜಗದೀಶ್ವರ್ ಬಿರಾದಾರ್, ವಿಠ್ಠಲದಾಸ್ ಪ್ಯಾಗೆ, ಮುಜಾಹಿದ್ ಪಾಶಾ ಖುರೇಶಿ, ಡಾ.ದೀಪಾ ನಂದಿ, ಅಸ್ಮಾ ಸುಲ್ತಾನಾ, ಸೈಯಿದಾ ಉಮ್ಮೆ ಹಬೀಬಾ, ಡಾ.ಬುಶ್ರಾ ಐಮನ್ ಹಾಗೂ ಎಹತೆಶಾಮುದ್ದೀನ್ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.