ಬೀದರ್ | ಸರ್ವ ರೋಗಕ್ಕೂ ಯೋಗದಲ್ಲಿ ಪರಿಹಾರ : ಶಾಸಕ ಪ್ರಭು ಚವ್ಹಾಣ್
ಬೀದರ್ : ಸರ್ವ ರೋಗಗಳಿಗೂ ಯೋಗದಲ್ಲಿ ಪರಿಹಾರವಿದ್ದು, ಎಲ್ಲರೂ ಪ್ರತಿದಿನ ತಪ್ಪದೇ ಯೋಗಾಭ್ಯಾಸ ಮಾಡುವುದನ್ನು ರೂಢಿಸಿಕೊಳ್ಳಬೇಕು. ಎಲ್ಲ ಶಾಲೆಗಳಲ್ಲಿ ಪ್ರತಿದಿನ ಕನಿಷ್ಠ ಅರ್ಧ ಗಂಟೆಯಾದರೂ ಯೋಗಾಭ್ಯಾಸ ಮಾಡಿಸಬೇಕು ಎಂದು ಶಾಸಕ ಪ್ರಭು ಚವ್ಹಾಣ್ ಅವರು ತಿಳಿಸಿದರು.
ಭಾರತೀಯ ಜನತಾ ಪಾರ್ಟಿ ಔರಾದ್(ಬಿ) ಮಂಡಲ ವತಿಯಿಂದ ಜೂ.21ರಂದು ಪಟ್ಟಣದಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಕೇವಲ ಶರೀರಕ್ಕೆ ಮಾತ್ರವಲ್ಲದೆ ಮಾನಸಿಕ ಆರೋಗ್ಯಕ್ಕೂ ಸಹಕಾರಿಯಾಗಿದೆ. ಯೋಗದಿಂದ ಮಾನಸಿಕ ಶುದ್ಧಿ, ಚಂಚಲತೆ ದೂರವಾಗುತ್ತದೆ. ವೈದ್ಯಕೀಯ ಕ್ಷೇತ್ರಕ್ಕೆ ಸವಾಲಾಗಿರುವ ಅದೆಷ್ಟೋ ಕಾಯಿಲೆಗಳು ಯೋಗದಿಂದ ವಾಸಿಯಾಗಿರುವ ಉದಾಹರಣೆಗಳಿವೆ. ಇದರಿಂದಾಗಿ ಯೋಗವನ್ನು ಜೀವನದ ಭಾಗವಾಗಿಸಿಕೊಳ್ಳಬೇಕು. ಮಕ್ಕಳಿಗೆ ಯೋಗದ ಮಹತ್ವ ತಿಳಿಸುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಯೋಗ ತರಬೇತಿ ನೀಡಿದ ಯೋಗಗುರು ಹಾವಗಿರಾವ್ ವಟಗೆ ಮಾತನಾಡಿದರು.
ಈ ಸಂದರ್ಭದಲ್ಲಿ ಯೋಗ ದಿನಾಚರಣೆಯ ಸಂಚಾಲಕ ಶಿವರಾಜ್ ಅಲ್ಮಾಜೆ, ಯೋಗಗುರು ಧನರಾಜ್ ವಲ್ಲೆಪೂರೆ, ಶಿವರಾಜ್ ಝುಲಂಡೆ, ಶಿವರಾಜ್ ಶೆಟಕಾರ್, ಮುಖಂಡರಾದ ಶಿವಾಜಿರಾವ್ ಪಾಟೀಲ್ ಮುಂಗನಾಳ್, ದಯಾನಂದ್ ಘೂಳೆ, ಡಾ.ವೈಜಿನಾಥ್ ಬುಟ್ಟೆ, ಸಚಿನ್ ರಾಠೋಡ್, ಕೇರಬಾ ಪವಾರ್, ಖಂಡೋಬಾ ಕಂಗಟೆ, ಪ್ರವೀಣ ಕಾರಬಾರಿ, ಮಹಾದೇವ್ ಅಲ್ಮಾಜೆ, ಸಂಜು ವಡೆಯರ್, ಯಾದು ಮೇತ್ರೆ, ಬಸವರಾಜ ಹಳ್ಳೆ ಹಾಗೂ ಗುಂಡಪ್ಪ ಮುಧಾಳೆ ಸೇರಿದಂತೆ ಅನೇಕರು ಇದ್ದರು.