ಬೀದರ್ | ರೋಗಮುಕ್ತ ಜೀವನ ಹೊಂದಲು ಯೋಗವು ಬಹಳ ಸಹಕಾರಿಯಾಗಿದೆ : ಡಾ.ಎಸ್.ವಿ.ಪಾಟೀಲ್
ಬೀದರ್ : ರೋಗಮುಕ್ತ ಜೀವನ ಹೊಂದಲು ಯೋಗವು ಬಹಳ ಸಹಕಾರಿಯಾಗಿದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಎಸ್.ವಿ.ಪಾಟೀಲ್ ಅವರು ಹೇಳಿದರು.
ಇಂದು ನಗರದ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಬಾಗಲಕೋಟೆಯ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ್ ನ ರಾಷ್ಟ್ರೀಯ ಸೇವಾ ಯೋಜನೆ ಮತ್ತು ತೋಟಗಾರಿಕೆ ಮಹಾವಿದ್ಯಾಲಯ ಇವರ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ 11ನೇ ಅಂತರರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮೊದಲ ಬಾರಿಗೆ ಅಂತರರಾಷ್ಟ್ರೀಯ ಯೋಗ ದಿನವನ್ನು ಜೂ.21, 2015 ರಂದು ಆಚರಿಸಲಾಯಿತು. ಭಾರತದ ಪ್ರಧಾನಮಂತ್ರಿ ಅವರು 27 ಸೆಪ್ಟೆಂಬರ್ 2014 ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗಕ್ಕೆ ಸಂಬಂಧಿಸಿದ ಪ್ರಭಾವಶಾಲಿ ಭಾಷಣ ನೀಡುವ ಮೂಲಕ ಈ ಉಪಕ್ರಮವನ್ನು ಕೈಗೊಂಡರು. ಈ ಕಾರಣಕ್ಕಾಗಿ ಜೂನ್ 21 ರಂದು ವಿಶ್ವ ಯೋಗ ದಿನ ಎಂದು ಘೋಷಿಸಲಾಯಿತು ಎಂದು ಮಾಹಿತಿ ನೀಡಿದರು.
ಯುವ ಯೋಗ ಪಟು ಆಶಾರಾಣಿ ಹೌದಖಾನಿ ಅವರು ಮಹಾವಿದ್ಯಾಲಯದ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳಿಗೆ ಯೋಗದ ಬಗ್ಗೆ ಮಾಹಿತಿ ನೀಡಿ, ಯೋಗದ ಆಸನಗಳ ಪ್ರಾತ್ಯಕ್ಷಿಕ ಮೂಲಕ ಯೋಗ ಮಾಡುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕ ಡಾ.ವಿಜಯಮಹಾಂತೇಶ್, ಡಾ.ರಮೇಶ್ ನಾಯಕ್, ಮಹಾವಿದ್ಯಾಲಯದ ಬೋಧಕ, ಬೊಧಕೇತರ ಸಿಬ್ಬಂದಿ ವರ್ಗದವರು ಹಾಗೂ ವಿದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.