ಬೀದರ್ | ಅಪರಾಧ ಮುಕ್ತ ಜಿಲ್ಲೆಯನ್ನಾಗಿ ನಿರ್ಮಿಸಲು ಯುವಸಮೂಹ ಪೊಲೀಸರೊಂದಿಗೆ ಕೈ ಜೋಡಿಸಬೇಕು : ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ
ಬೀದರ್ : ಮಾದಕವಸ್ತುಗಳ ಮತ್ತು ಸಂಚಾರ ನಿಯಮಗಳ ಬಗ್ಗೆ ನಿರಂತರವಾಗಿ ಪೊಲೀಸ್ ಇಲಾಖೆ ಜನ ಜಾಗೃತಿ ಮೂಡಿಸುತ್ತಿದೆ. ಜಿಲ್ಲೆಯನ್ನು ಅಪರಾಧ ಮುಕ್ತವಾಗಿ ನಿರ್ಮಾಣ ಮಾಡಲು ಯುವಸಮೂಹ ಪೊಲೀಸರೊಂದಿಗೆ ಕೈ ಜೋಡಿಸಿ ಸಹಕಾರ ನೀಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಹೇಳಿದರು.
ಇಂದು ಬೀದರ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸ್ಟೇಟ್ ಬ್ಯಾಂಕ್ ಆ ಇಂಡಿಯಾ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಡ್ರಗ್ಸ್, ಅಪರಾಧಮುಕ್ತ ಬೀದರ್ ಜಿಲ್ಲೆ ರೂಪಿಸಲು ಹಮ್ಮಿಕೊಂಡಿದ್ದ ಪೊಲೀಸ್ ಹಾಗೂ ನಾಗರಿಕರಿಂದ ಕೂಡಿದ್ದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಎನ್ನುವ ಘೋಷವಾಕ್ಯದಡಿ ಪೊಲೀಸ್ ರನ್ - 2025 ಮ್ಯಾರಾಥನ್ ಚಾಲನಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಗಳು ಹೆಚ್ಚು ಜನಪರ ಮತ್ತು ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯವಾಗಿ ಪಾಲ್ಗೋಳ್ಳುವಿಕೆ ಮುಖ್ಯವಾಗಿದೆ. ಡ್ರಗ್ಸ್ ನಿಯಂಯ್ರಣಕ್ಕೆ ಹಾಗೂ ರಸ್ತೆ ಅಪಘಾತಗಳು ತಪ್ಪಿಸಿ ಸಂಚಾರ ನಿಯಮ ಉತ್ತಮವಾಗಿ ನಿರ್ವಹಿಸಲು ಯುವಕ, ಯುವತಿಯರ ಸಹಕಾರ ಮುಖ್ಯ. ಉತ್ತಮ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ, ಸಕ್ರಿಯವಾಗಿ ಭಾಗವಹಿಸಬೇಕು. ಪೊಲೀಸ್ ರನ್-2025 ಗೆ ಯುವ ಸಮೂಹದಿಂದ ಉತ್ತಮ ಸ್ಪಂದನೆ ಮೂಡಿದೆ ಎಂದು ಅವರು ತಿಳಿಸಿದರು.
ಪೊಲೀಸ್ ರನ್ ನಗರದ ಸಿದ್ಧಾರೂಢ ಮಠದಿಂದ ಆರಂಭಗೊಂಡು ಬಿವಿಬಿ ಕಾಲೇಜು, ಮೈಲೂರ ಕ್ರಾಸ್, ಹಾರೂರಗೇರಿ ಕಮಾನ್, ಬೋಮ್ಮಗೊಂಡೇಶ್ವರ ವೃತ್ತ, ಭಗತಸಿಂಗ್ ವೃತ್ತ, ಶಿವಾಜಿ ವೃತ್ತ, ಮಡಿವಾಳ್ ವೃತ್ತದ ಮಾರ್ಗವಾಗಿ ಸುಮಾರು 5 ಕಿ. ಮೀ ಸಾಗಿ ಶಿವನಗರ ವಾಕಿಂಗ್ ಪಾಥ್ ಬಳಿ ಮುಕ್ತಾಯಗೊಂಡಿತು.
ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಂದ್ರಕಾಂತ್ ಪೂಜಾರಿ, ಎಸ್ ಬಿ ಐ ಪ್ರಾದೇಶಿಕ ವ್ಯವಸ್ಥಾಪಕ ನಾಗರಾಜ್ ಹಾಗೂ ಪೊಲೀಸ್ ಅಧಿಕಾರಿ, ಎಸ್ ಬಿ ಐ ಬ್ಯಾಂಕ್ ಅಧಿಕಾರಿ, ಸಿಬ್ಬಂದಿ ಮತ್ತು ವಿವಿಧ ಸಂಘಟನೆಗಳ ಪ್ರಮುಖರು ಸೇರಿದಂತೆ ವಿದ್ಯಾರ್ಥಿ, ಸಾರ್ವಜನಿಕರು ಉಪಸ್ಥಿತರಿದ್ದರು.