×
Ad

ಮುಂದುವರಿದ ಕೈ ನಾಯಕರ ಅಸಮಾಧಾನ; ಬೀದರ್‌ನಲ್ಲಿ ಸಭೆ

Update: 2025-06-29 19:37 IST

ಬೀದರ್ : ಜಿಲ್ಲೆಯಲ್ಲಿ ಕಾಂಗ್ರೆಸ್ ನಾಯಕರ ಅಸಮಾಧಾನ ಮುಂದುವರಿದಿದ್ದು, ನಗರದ ಖಾಸಗಿ ಹೋಟೆಲ್ ಒಂದರಲ್ಲಿ ಇಂದು ಸಭೆ ನಡೆಸಿದ್ದಾರೆ.

ಸಭೆ ಮುಗಿದ ಬಳಿಕ ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ನಮ್ಮ ಪಕ್ಷದ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಅವರನ್ನು ನಾವು ಭೇಟಿಯಾಗಿ ಜಿಲ್ಲೆಯಲ್ಲಿ ಆಗಿರುವ ಪ್ರತಿಯೊಂದು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದೇವೆ. 2023 ರ ಚುನಾವಣೆಯ ನಂತರ ಯಾವ ರೀತಿಯಲ್ಲಿ ಅಭಿವೃದ್ಧಿಯಾಗುತ್ತಿದೆ ಎನ್ನುವುದರ ಬಗ್ಗೆಯೂ ಅವರ ಗಮನಕ್ಕೆ ತಂದಿದ್ದೇವೆ. ಇದನ್ನು ಗಮನಿಸಿದ ಅವರು ನಮ್ಮ ಜಿಲ್ಲೆಯಲ್ಲಿ ನಡೆಯುತ್ತಿರುವುದರ ಬಗ್ಗೆ ಸಮೀಕ್ಷೆ ನಡೆಸಲು ತಂಡವೊಂದು ಕಳುಹಿಸಲಾಗುವುದು. ಅದರ ವರದಿ ಬಂದ ನಂತರ ಇದರ ಬಗ್ಗೆ ಮಾತನಾಡೋಣ ಎಂದು ಅವರು ಹೇಳಿದ್ದಾರೆ ಎಂದರು.

ಬೆಂಗಳೂರಿಗೆ ನಾಲ್ಕು ಐದು ಜನ ಮಾತ್ರ ಹೋಗಿ ಅಧ್ಯಕ್ಷರನ್ನು ಭೇಟಿ ಮಾಡಿದ್ದೇವೆ. ಉಳಿದವರು ಆ ಸಭೆಗೆ ಬರಲಿಲ್ಲ ಆದ್ದರಿಂದಾಗಿ ಆ ಸಭೆಯಲ್ಲಿ ನಡೆದಿದ್ದನ್ನು ಉಳಿದವರಿಗೆ ಕೂಡ ಸ್ಪಷ್ಟನೆ ನೀಡಬೇಕು ಎಂದು ಈ ಸಭೆ ಕರೆದಿದ್ದೇವೆ. ನಾವು ನಾಮಿನೇಷನ್ ಸಲುವಾಗಿ ಹೋರಾಟ ಮಾಡುತ್ತಿಲ್ಲ. ಜಿಲ್ಲೆಯಲ್ಲಿ ಕಾರ್ಯಕರ್ತರಿಗೆ ಮಾನ್ಯತೆ ಸಿಗುತ್ತಿಲ್ಲ. ಅದಕ್ಕಾಗಿ ನಾವು ಈ ಹೋರಾಟದ ಮುಖಾಂತರ ಅಧ್ಯಕ್ಷ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಬಯಸುತ್ತಿದ್ದೇವೆ ಎಂದು ತಿಳಿಸಿದರು.

ಮಾಜಿ ವಿಧಾನ ಪರಿಷತ್ ಸದಸ್ಯ ಅರವಿಂದಕುಮಾರ್ ಅರಳಿ ಅವರು ಮಾತನಾಡಿ, ಬರುವ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಯಾವ ರೀತಿಯ ಕೆಲಸ ಮಾಡಬೇಕು ಎಂದು ಚರ್ಚೆ ಮಾಡಿದ್ದೇವೆ. ಹಾಗೆಯೇ ಉಸ್ತುವಾರಿ ಸಚಿವರು ಮತ್ತು ಜಿಲ್ಲಾಧ್ಯಕ್ಷರು ಕೂಡಿಕೊಂಡು ಅವರ ಮನಸ್ಸಿಗೆ ಬರುವುದನ್ನೇ ಮಾಡುತ್ತಿದ್ದಾರೆ. ಉಳಿದ ನಾಯಕರನ್ನು ಕಡೆಗಣಿಸುತ್ತಿದ್ದಾರೆ. ಇದರ ಬಗ್ಗೆಯೂ ಕೂಡ ಚರ್ಚೆ ನಡೆಸಿದ್ದೇವೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಚಂದ್ರಶೇಖರ್ ಪಾಟೀಲ್, ಭೀಮರಾವ್ ಪಾಟೀಲ್, ಮಾಜಿ ವಿಧಾನ ಪರಿಷತ್ ಸದಸ್ಯ ಪುಂಡಲೀಕರಾವ್, ಅಬ್ದುಲ್ ಮನ್ನಾನ್ ಸೇಠ್ ಹಾಗೂ ಗುಂಡುರೆಡ್ಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News