ಡಾ.ಬಸವಲಿಂಗ ಪಟ್ಟದ್ದೇವರು ತಮ್ಮ ಬದುಕನ್ನು ಬಸವತತ್ವ ಪ್ರಚಾರಕ್ಕೆ ಮುಡಿಪಾಗಿಟಿದ್ದಾರೆ : ನಿವೃತ್ತ ನ್ಯಾ.ಶಿವರಾಜ್ ಪಾಟೀಲ್
ಬೀದರ್ : ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರದ್ದು ಬಸವಮಯ ಬದುಕಾಗಿದೆ. ಅವರು ತಮ್ಮ ಇಡೀ ಬದುಕು ಬಸವತತ್ವ ಪ್ರಚಾರ, ಪ್ರಸಾರಕ್ಕೆ ಮುಡಿಪಾಗಿಟಿದ್ದಾರೆ ಎಂದು ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರು ಹೇಳಿದರು.
ಇಂದು ಪಟ್ಟಣದ ಚನ್ನಬಸವಾಶ್ರಮದಲ್ಲಿ ಅಮೃತ ಮಹೋತ್ಸವ ಸ್ವಾಗತ ಸಮಿತಿ ವತಿಯಿಂದ ಆಯೋಜಿಸಿದ್ದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರ ಅಮೃತ ಮಹೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಹಿರೇಮಠ ಸಂಸ್ಥಾನ ಪ್ರಾಚೀನ ಮಠವಾಗಿದ್ದು, ತನ್ನದೆಯಾದ ಐತಿಹಾಸಿಕ ಹಿನ್ನೆಲೆ ಪರಂಪರೆ ಹೊಂದಿದೆ. ಕಲ್ಯಾಣ ಕರ್ನಾಟಕ ಭಾಗದ ಭಕ್ತರ ಶ್ರದ್ಧಾ, ಭಕ್ತಿಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ಅಂತಹ ಮಠದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವಿಶ್ವಗುರು ಬಸವಣ್ಣನವರು ಬೋಧಿಸಿದ ಕಾಯಕ, ದಾಸೋಹ ತತ್ವವನ್ನು ನಾಡಿನಾದ್ಯಂತ ಬೆಳಗಿಸುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ವಿದ್ಯಾ ದೇಗುಲ ತೆರೆದು ಸುಮಾರು 20 ಸಾವಿರ ಮಕ್ಕಳಿಗೆ ಶಿಕ್ಷಣ ಕಲ್ಪಿಸಿ ಅವರ ಭವಿಷ್ಯವನ್ನು ಉಜ್ವಲ ಮಾಡುವ ಕೆಲಸ ಮಾಡುತ್ತಿದ್ದಾರೆ. ಅವರ ಉಸಿರು ಬಸವಮಯವಾಗಿದೆ. ನಾಡಿನಾದ್ಯಂತ ಬಸವ ಪ್ರಜ್ಞೆ ಮೂಡಿಸುತ್ತಿದ್ದಾರೆ. ಅವರ ಮಾರ್ಗದರ್ಶನ ಸದೃಡ ಸಮಾಜಕ್ಕೆ ಅಗತ್ಯವಾಗಿದೆ. ಅಂತಹ ಪೂಜ್ಯರು ಮುಂದಿನ ವರ್ಷಗಳಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿ ಎಂದು ಹಾರೈಸಿದರು.
ದಿವ್ಯ ಸಾನ್ನಿಧ್ಯ ವಹಿಸಿದ ಸುತ್ತೂರು ಜಗದ್ಗುರು ವೀರಸಿಂಹಾಸನ ಮಠದ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಮಾತನಾಡಿ, ಸ್ವಾಮೀಜಿಯಿಂದ ಮಠವಿಲ್ಲ, ಮಠದಿಂದ ಸ್ವಾಮೀಜಿಯನ್ನು ಎನ್ನುವುದನ್ನು ಶತಾಯಿಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ವಿಧಾಯಕ ಕಾರ್ಯದ ಮೂಲಕ ತೋರಿಸಿ ಕೊಟ್ಟಿದ್ದರು. ಅಂತಹ ಪೂಜ್ಯರ ಮಾರ್ಗದಲ್ಲಿ ಹೆಜ್ಜೆಯಿಟ್ಟಿರುವ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು, ವಿಶ್ವಗುರು ಬಸವಣ್ಣನವರ ವಿಚಾರಧಾರೆಗಳನ್ನು ಜಗದಗಲ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, ವಿಶ್ವಗುರು ಬಸವಣ್ಣನವರ ಚಿಂತನೆಗಳು ವಿಶ್ವಕ್ಕೆ ತಲುಪಬೇಕಿದೆ. ಈ ಹಿನ್ನೆಲೆಯಲ್ಲಿ ಬುದ್ಧ, ಮಹಾವೀರ, ಗುರುನಾನಕ ಜಯಂತಿಗಳಿಗೆ ರಜೆ ನೀಡುವಂತೆ ಬಸವಣ್ಣನವರ ಜಯಂತಿಗೂ ಕೇಂದ್ರ ಸರಕಾರ ರಜೆ ಘೋಷಣೆ ಮಾಡಿದ್ದರೆ, ಬಸವಣ್ಣನವರ ವಿಚಾರಧಾರೆಗಳು ಮತ್ತಷ್ಟು ವೇಗವಾಗಿ ಜಾಗತಿಕ ಮಟ್ಟಕ್ಕೆ ತಲುಪಲಿವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ ಖಂಡ್ರೆ, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಸಿದ್ದಯ್ಯ ಸ್ವಾಮೀಜಿ, ಶಾಸಕ ಡಾ.ಸಿದ್ದು ಪಾಟೀಲ್, ಯುವ ಮುಖಂಡ ಚನ್ನಬಸವಣ್ಣ ಬಳತೆ, ಪುರಸಭೆ ಉಪಾಧ್ಯಕ್ಷ ವಿಜಯಕುಮಾರ್ ರಾಜಭವನ, ಭಾರತೀಯ ಬಸವ ಬಳಗದ ರಾಜ್ಯಾಧ್ಯಕ್ಷ ಬಾಬು ವಾಲಿ, ಕಲಬುರಗಿಯ ವಾಸ್ತುಶಿಲ್ಪಿ ಬಸವರಾಜ ಖಂಡೇರಾವ್, ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ್ ಧನ್ನೂರ್, ಭಾರತೀಯ ಬಸವ ಬಳಗದ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಕುಂತಲಾ ಬೆಲ್ದಾಳೆ ಹಾಗೂ ರಾಜಶೇಖರ್ ಅಷ್ಟೂರೆ ಸೇರಿದಂತೆ ಹಲವರು ಇದ್ದರು.