×
Ad

ಮೋಹನ ಭಾಗವತ್ ರೈತರ, ದಲಿತರ ಮೇಲಾಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ : ಮಾವಳ್ಳಿ ಶಂಕರ್

Update: 2025-11-26 20:35 IST

ಬೀದರ್ : ಆರ್‌ಎಸ್‌ಎಸ್ ಸಂಘಟನೆ ಮಾಡುವ ತಾರತಮ್ಯ ನೀತಿಗೆ ನಮ್ಮ ಬೆಂಬಲವಿಲ್ಲ. ಆರ್‌ಎಸ್‌ಎಸ್ ಮುಖಂಡ ಮೋಹನ ಭಾಗವತ್ ಅವರು ವಿಷಕಾರಿ ಮಾತುಗಳನ್ನು ಆಡುತ್ತಿರುತ್ತಾರೆ. ಆದರೆ ದಲಿತರ, ರೈತರ ಮತ್ತು ಮಹಿಳೆಯರ ಮೇಲೆ ಆಗುವ ದೌರ್ಜನ್ಯದ ಬಗ್ಗೆ ಮಾತನಾಡುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಅಪಾಯಕ್ಕೆ ಸಿಲುಕುವ ಸಂಭವವಿದೆ ಎಂದು ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ಯ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಕಳವಳ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾವಳ್ಳಿ ಶಂಕರ್, ಇಂದಿನ ದಿನಗಳಲ್ಲಿ ದೇಶದಲ್ಲಿ ಉದಾರಿಕರಣ, ಜಾಗತಿಕರಣದಿಂದ ಎಲ್ಲವೂ ಖಾಸಗೀಕರಣಗೊಳಿಸುವ ಹುನ್ನಾರ ನಡೆಯುತ್ತಿದೆ. ದಲಿತರ, ಹಿಂದುಳಿದವರ ಮತ್ತು ಶೋಷಿತರ ಹಕ್ಕುಗಳನ್ನು ಕಸಿಯುವ ವ್ಯವಸ್ಥಿತ ಷಡ್ಯಂತ್ರ ನಡೆಯುತ್ತಿದೆ ಎಂದರು.

ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜನೆ ಮಾಡುವ ಕಾರ್ಯ ಸಲ್ಲದು. ಯಾವುದೇ ಸರಕಾರವಿರಲಿ ಅಖಂಡ ರಾಷ್ಟ್ರದ ಪರಿಕಲ್ಪನೆ ಹೊಂದಬೇಕೆ ವಿನಃ ವಿಭಜಿಸುವ ಕಾರ್ಯಕ್ಕೆ ಮುಂದಾಗಬಾರದು. ಸಂವಿಧಾನದ ನಿಜಾಂಶಗಳು ಜನತೆಗೆ ತಲುಪುತ್ತಿಲ್ಲ. ಪ್ರಧಾನಮಂತ್ರಿಗಳ ಮಾತು ಕೇಳುತ್ತಿದ್ದರೆ ದೇಶ ಯಾವ ದಿಕ್ಕಿಗೆ ಸಾಗುತ್ತಿದೆ ಎಂಬ ಆತಂಕ ಕಾಡುತ್ತಿದೆ. ದಲಿತ ಸಂಘರ್ಷ ಸಮಿತಿಯು ಜನತೆಗೆ ಸತ್ಯ ತಿಳಿಸುವ ಕಾರ್ಯ ಮಾಡುತ್ತಿದೆ. ಆರ್‌ಎಸ್‌ಎಸ್ ಮತ್ತು ಡಿಎಸ್‌ಎಸ್ ಮಾಡುವ ಕಾರ್ಯಗಳ ಕುರಿತು ಚರ್ಚೆ ಆಗಬೇಕಾಗಿದೆ. ಬೀದರ್ ಜಿಲ್ಲೆಯಿಂದಲೇ ದಲಿತ ಸಂಘರ್ಷ ಸಮಿತಿಯ ಸದಸ್ಯತ್ವಕ್ಕೆ ಚಾಲನೆ ನೀಡುತ್ತಿದ್ದೇವೆ. ಜಾತಿ, ಮತ, ಪಂಥಗಳ ಭೇದವಿಲ್ಲದೆ ಸದಸ್ಯರಾಗಬಹುದು. 1 ಲಕ್ಷ ಸದಸ್ಯತ್ವದ ಗುರಿ ಹೊಂದಿದ್ದೇವೆ ಎಂದು ಹೇಳಿದರು.  

ಈ ಸಂದರ್ಭದಲ್ಲಿ ದಲಿತ ಮಹಿಳಾ ಒಕ್ಕೂಟದ ಮುಖ್ಯಸ್ಥೆ ಇಂದಿರಾ ಕೃಷ್ಣಪ್ಪ, ಪತ್ರಕರ್ತ ಎನ್.ನಾಗರಾಜ್, ಡಿಎಸ್ಎಸ್ ಅಂಬೇಡ್ಕರ್ ವಾದ ಜಿಲ್ಲಾ ಸಂಚಾಲಕ ರಮೇಶ್ ಮಂದಕನಳ್ಳಿ, ರಾಜಕುಮಾರ್ ಬನ್ನೇರ್, ನಾಗಣ್ಣ ಬಡಿಗೇರ್, ರಾಮಣ್ಣ ಕಲದೇವನಹಳ್ಳಿ, ರಂಜಿತಾ ಜೈನೂರ್, ಜಗದೇವಿ ಭಂಡಾರಿ ಹಾಗೂ ದೈವಶೀಲಾ ಉಪಸ್ಥಿತರಿದ್ದರು.  

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News