ಬಿಸಿಯೂಟದಿಂದ ಮಕ್ಕಳ ದಾಖಲಾತಿ, ಹಾಜರಾತಿಯಲ್ಲಿ ಹೆಚ್ಚಳ : ಕಿರಣ್ ಪಾಟೀಲ್
ಬೀದರ್ : ಮಧ್ಯಾಹ್ನದ ಉಪಹಾರ ಯೋಜನೆ ಸರ್ಕಾರದ ಮಹತ್ವದ ಯೋಜನೆಯಾಗಿದೆ. ಇದರಿಂದ ಶಾಲೆಗಳಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ ಹೆಚ್ಚಿಸುವಲ್ಲಿ ಸಹಕಾರಿಯಾಗುತ್ತದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಕಿರಣ್ ಪಾಟೀಲ್ ಅಭಿಪ್ರಾಯಪಟ್ಟರು.
ಇಂದು ನಗರದ ಆಕ್ಸಫರ್ಡ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಧಾನ ಮಂತ್ರಿ ಘೋಷಣ್ ಶಕ್ತಿ ನಿರ್ಮಾಣ್ (ಮಧ್ಯಾಹ್ನ ಉಪಹಾರ ಯೋಜನೆ) ಅಡಿಯಲ್ಲಿ ಬೀದರ್ ತಾಲ್ಲೂಕಿನ ಸರ್ಕಾರಿ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಧ್ಯಾಹ್ನದ ಬಿಸಿಯೂಟದ ಮುಖ್ಯ ಅಡಿಗೆಯವರಿಗೆ ಹಾಗೂ ಅಡುಗೆ ಸಹಾಯಕಿಯರಿಗೆ ಒಂದು ದಿನದ ತರಬೇತಿಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಸಿಯೂಟ ಅಡುಗೆದಾರರು ಊಟ ತಯಾರಿಸಿ ಮಕ್ಕಳಿಗೆ ಊಟ ಬಡಿಸುವುದು ತುಂಬಾ ಪವಿತ್ರವಾದ ಕಾರ್ಯವಾಗಿದೆ. ಈ ಹಂತದಲ್ಲಿ ಮಕ್ಕಳ ಸ್ವಚ್ಛತೆ ಮತ್ತು ಸುರಕ್ಷತೆ ಕಾಪಾಡುವುದು ತುಂಬಾ ಮುಖ್ಯವಾಗಿದೆ ಎಂದು ಬಿಸಿಯೂಟ ಕಾರ್ಯಕರ್ತರಿಗೆ ತಿಳಿ ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಿಸರ್ಚ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ವಿಶ್ವರಾಧ್ಯ ಹಿರೇಮಠ್ ಅವರು ಮಾತನಾಡಿ, ಮಧ್ಯಾಹ್ನದ ಉಪಹಾರ ಯೋಜನೆ ಅತೀ ಮಹತ್ವದ ಯೋಜನೆಯಾಗಿದೆ. ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಬರುವ ಮಕ್ಕಳಿಗೆ ಇದೊಂದು ವರದಾನವಾಗಿದೆ. ಇದರಿಂದ ಹಾಜರಾತಿ ಹೆಚ್ಚಳವಾಗಿ ಶಿಕ್ಷಣದ ಗುಣಮಟ್ಟ ಹೆಚ್ಚುತ್ತಿದೆ ಎಂದರು.
ಡಾ.ಜ್ಯೋತಿ ರವರು ಅಡುಗೆ ಸಿಬ್ಬಂದಿಗೆ ತರಬೇತಿ ನೀಡುತ್ತಾ, ಅಡುಗೆಯವರು ಪ್ರತಿ ಆರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಕಡ್ಡಾಯವಾಗಿದೆ. ಪ್ರತಿಯೊಬ್ಬ ಮನುಷ್ಯ ಆರೋಗ್ಯವಂತನಾಗಿರಲು ಅವನ ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಬಹು ಮುಖ್ಯವಾಗಿದೆ. ಅಡುಗೆ ಸಿಬ್ಬಂದಿ ಶಾಲೆಗಳಲ್ಲಿ ಅಡುಗೆ ತಯಾರಿಸುವಾಗ ಕಡ್ಡಾಯವಾಗಿ ತಲೆಗವಸ ಮತ್ತು ಎಪ್ರಾನ್ ಧರಿಸಿ ಅಡುಗೆ ಸಿದ್ದಪಡಿಸಬೇಕು. ಕೆಮ್ಮು, ಸೀತ ಬಂದಾಗ ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಅಡುಗೆ ಸಿದ್ದಪಡಿಸಲು ತಿಳಿಸಿದರು.
ದೀಕ್ಷಾ ಇಂಡಿಯನ್ ಗ್ಯಾಸ್ ಏಜೆನ್ಸಿಯವರಾದ ಪೃಥ್ವಿರಾಜ್ ಹಾಗೂ ಪ್ರವೀಣ್ ಅವರು ಶಾಲೆಗಳಲ್ಲಿ ಗ್ಯಾಸ್ ಸಿಲೆಂಡರ್ ಗಳ ಬಳಕೆ ಮಾಡುವ ಮತ್ತು ಅದರ ಸುರಕ್ಷತಾ ಕ್ರಮಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು.
ಅಕ್ಷರ ದಾಸೋಹ ತಾಲ್ಲೂಕು ಸಹಾಯಕ ನಿರ್ದೇಶಕ ಜಾಕಿರ್ ಹುಸೇನ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವೈದ್ಯರಾದ ಡಾ. ವೈಶಾಲಿ, ಡಾ. ಸುಶ್ಮಿತಾ, ಮಂದಕನಳ್ಳಿ ಸಿ ಆರ್ ಪಿ ಬಸವರಾಜ್, ರಾಜಗೀರಾ ಸಿ ಆರ್ ಪಿ ಮಹೇಶ್ ಕುಮಾರ್ ದುಪೆ, ಆಕ್ಸಫರ್ಡ್ ಶಾಲೆಯ ಮುಖ್ಯಗುರು ಉದಯಕುಮಾರ್ ಹಾಗೂ ಸುಮಾರು 300 ಜನ ಬಿಸಿಯೂಟ ಸಿಬ್ಬಂದಿ ಭಾಗವಹಿಸಿದ್ದರು.