ರಾಜಶೇಖರ್ ಪಾಟೀಲ್ ಅವರ ಆರೋಪ ಸತ್ಯಕ್ಕೆ ದೂರ: ಸೋಮನಾಥ್ ಪಾಟೀಲ್
ಬೀದರ್ : ಮಾಜಿ ಸಚಿವ ರಾಜಶೇಖರ್ ಪಾಟೀಲ್ ಅವರು ನಮ್ಮ ಪಕ್ಷದ ಮೇಲೆ ಮಾಡುತ್ತಿರುವ ಆರೋಪ ಸತ್ಯಕ್ಕೆ ದೂರವಾಗಿದ್ದು, ಇದರ ಬಗ್ಗೆ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಅವರು ಸ್ಪಷ್ಟಿಕರಣ ನೀಡಬೇಕು ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಅವರು ಒತ್ತಾಯಿಸಿದ್ದಾರೆ.
ಇಂದು ನಗರದಲ್ಲಿ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡ್ಮೂರು ದಿನದ ಹಿಂದೆ ರಾಜಶೇಖರ್ ಪಾಟೀಲ್ ಅವರು ಸಚಿವ ಈಶ್ವರ್ ಖಂಡ್ರೆ ಅವರು ಉಪಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿಗಳ ಹತ್ತಿರ ಹೊಂದಾಣಿಕೆ ರಾಜಕೀಯದ ಬಗ್ಗೆ ತಿಳಿಸಿದ್ದಾರೆಂದು ಆರೋಪಿಸಿದ್ದಾರೆ. ಇದಕ್ಕೆ ಈಶ್ವರ್ ಖಂಡ್ರೆ ಅವರೇ ಉತ್ತರಿಸಬೇಕು ಎಂದರು.
ನಾವು ಕಳೆದ ಒಂದೂವರೆ ವರ್ಷದಿಂದ ಜಿಲ್ಲೆಯಲ್ಲಿ ಜಿಲ್ಲಾಡಳಿತ ನೆಲಕಚ್ಚಿ ಹೋಗಿದೆ ಎಂದು ಹೇಳುತ್ತಿದ್ದೇವೆ. ಇವಾಗ ಕಾಂಗ್ರೆಸ್ ನವರೇ ಈ ಮಾತನ್ನು ಹೇಳುತ್ತಿದ್ದಾರೆ. ಇಂದು ಸಚಿವರ ಕ್ಷೇತ್ರ ಭಾಲ್ಕಿಯಲ್ಲಿಯೇ ಮರಳು ಮಾಫಿಯಾ ನಡೆಯುತ್ತಿದೆ. ಹಗಲು ದರೋಡೆ, ಕೊಲೆಗಳು ನಡೆಯುತ್ತಿವೆ. ಜಿಲ್ಲೆಯಲ್ಲಿ ತುಂಬೆಲ್ಲ ಗ್ರೂಪ್ ಡಿ ಹುದ್ದೆಗಳು ಬರೀ ಭಾಲ್ಕಿ ಕ್ಷೇತ್ರದವರನ್ನೇ ನೇಮಿಸಿಕೊಳ್ಳುತ್ತಿದ್ದಾರೆ. ನಿರ್ಣಾ ಗ್ರಾಮದ ಹತ್ತಿರ ಒಂದು ಕ್ಲಬ್ ನಡೆಯುತ್ತಿದೆ. ಕಳೆದ ಒಂದು ಒಂದುವರೆ ವರ್ಷದಿಂದ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸ ಆಗಿಲ್ಲ ಎಂದು ಆರೋಪಿಸಿದರು.
ಶಾಸಕ ಪ್ರಭು ಚೌವ್ಹಾಣ್ ಅವರು ಮಾತನಾಡಿ, ಚುನಾವಣೆ ನಡೆದು ವರ್ಷ ಕಳೆಯಿತು. ರಾಜಶೇಖರ್ ಪಾಟೀಲ್ ಅವರು ಸತ್ಯ ಹರಿಶ್ಚಂದ್ರ ಆಗಿದ್ದರೆ, ಅವರು ಆವಾಗಲೇ ಪ್ರೆಸ್ ಮೀಟ್ ಮಾಡಿ ಈ ವಿಷಯ ತಿಳಿಸಬೇಕಿತ್ತು. ಆದರೆ ಅವರು ಈ ವಿಷಯ ಇವಾಗ ಯಾಕೆ ತೆಗೆಯುತ್ತಿದ್ದಾರೆ. ತಮ್ಮ ಮನೆಯಲ್ಲಿದ್ದ ಬೆಂಕಿ ಬೇರೆಯವರ ಮನೆಗೂ ಹಾಕುತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಾಸಕ ಶರಣು ಸಲಗರ್ ಅವರು ಮಾತನಾಡಿ, ಈಶ್ವರ್ ಖಂಡ್ರೆ ಅವರು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಬಳಿ ಹೊಂದಾಣಿಕೆ ರಾಜಕೀಯದ ಬಗ್ಗೆ ಹೇಳಿದ್ದು ಸುಳ್ಳು. ನಮ್ಮ ಪಕ್ಷದ ಯಾವ ನಾಯಕರು ಹಾಗೆ ಮಾಡಲಿಲ್ಲ. ಜಮ್ಮು ಕಾಶ್ಮೀರದ ಜಗಳ ಬಗೆ ಹರಿಯುತ್ತದೆ. ಆದರೆ ಈಶ್ವರ್ ಖಂಡ್ರೆ ಮತ್ತು ರಾಜಶೇಖರ್ ಪಾಟೀಲ್ ಅವರ ಜಗಳ ಬಗೆಹರಿಯುವುದಿಲ್ಲ ಎಂದು ಲೇವಡಿ ಮಾಡಿದ ಅವರು, 2028 ರ ಚುನಾವಣೆಯಲ್ಲಿ ಜಿಲ್ಲೆಯ 6 ಕ್ಷೇತ್ರದಲ್ಲಿ ನಾವೇ ಗೆಲ್ಲುತ್ತೇವೆ ಎಂದು ಭವಿಷ್ಯ ನುಡಿದರು.
ಶಾಸಕ ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ರಾಜಶೇಖರ್ ಪಾಟೀಲ್ ಮತ್ತು ಈಶ್ವರ್ ಖಂಡ್ರೆ ಅವರ ಜಗಳ ಇಡೀ ಜಿಲ್ಲೆಯ ಜನ ನೋಡುತ್ತಿದ್ದಾರೆ. ರಾಜಶೇಖರ್ ಪಾಟೀಲ್ ಅವರು ನಮ್ಮ ಹೆಗಲ ಮೇಲೆ ಬಂದೂಕು ಇಟ್ಟು ಈಶ್ವರ್ ಖಂಡ್ರೆ ಅವರಿಗೆ ಹೊಡೆಯುತ್ತಿದ್ದಾರೆ. ಸಮಯ ಸಿಕ್ಕಾಗ ಹೊಂದಾಣಿಕೆ ರಾಜಕೀಯ ಮಾಡುವುದು ಕಾಂಗ್ರೆಸ್ ಪಕ್ಷದ ಜಾಯಮಾನವಾಗಿದೆ. ರಾಜಶೇಖರ್ ಪಾಟೀಲ್ ಅವರು ಆಡಿದ ಮಾತುಗಳು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಪೀರಪ್ಪ ಔರದೆ, ಶಶಿಧರ್ ಹೊಸಳ್ಳಿ ಹಾಗೂ ಬಾಬುರಾವ್ ಕಾರಬಾರಿ ಸೇರಿದಂತೆ ಇತರರು ಇದ್ದರು.