ಯರನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸಂಜು ಸಿದ್ದಾಪುರ್ ಆಯ್ಕೆ
Update: 2025-01-21 18:58 IST
ಸಂಜು ಸಿದ್ದಾಪುರ್
ಬೀದರ್: ಸಾಕಷ್ಟು ಹಗ್ಗ- ಜಗ್ಗಾಟ ಮತ್ತು ಕೂತುಹಲಕ್ಕೆ ಕಾರಣವಾಗಿದ್ದ ಯರನಳ್ಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಗೆ ಕೊನೆಗೂ ತೆರೆ ಬಿದ್ದಿದ್ದು, ಸಂಘದ ಅಧ್ಯಕ್ಷರಾಗಿ ಸಂಜು ಸಿದ್ದಾಪುರ್ ಆಯ್ಕೆಯಾಗಿದ್ದಾರೆ.
ಕಳೆದ ಐದು ವರ್ಷಗಳಿಂದ ಯರನಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಈ ಬಾರಿಯ ಚುನಾವಣೆಯಲ್ಲಿಯೂ ಸಹ 12 ಜನರಲ್ಲಿ 8 ಜನ ನಿರ್ದೇಶಕರ ಬಲದೊಂದಿಗೆ ಎರಡನೆಯ ಅವಧಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಚುನಾವಣೆಯಲ್ಲಿ ತಮ್ಮನ್ನು ಹೇಗಾದರೂ ಮಾಡಿ ಸೋಲಿಸಬೇಕು ಎಂಬ ದುರುದ್ದೇಶದಿಂದ ಹಲವರು ಅಪಪ್ರಚಾರ ಮಾಡಿದರು. ಆದರೆ ನನ್ನ ಐದು ವರ್ಷಗಳ ಸೇವೆಯನ್ನು ಮೆಚ್ಚಿದ ಅನ್ನದಾತರು ಮತ್ತೊಮ್ಮೆ ಜನ ಸೇವೆ ಮಾಡಲು ಅವಕಾಶ ನೀಡಿದ್ದಾರೆ ಎಂದರು.