ಆಂಧ್ರಪ್ರದೇಶ : ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ; ಒಂದೇ ಕುಟುಂಬದ ಐವರು ಮೃತ್ಯು
Update: 2026-03-05 08:11 IST
ಕೋಲಾರ, ಮಾ.5: ತಿರುಪತಿ ದರ್ಶನಕ್ಕೆ ಕಾರಿನಲ್ಲಿ ತೆರಳುತ್ತಿದ್ದ ಬೆಂಗಳೂರಿನ ಒಂದೇ ಕುಟುಂಬದ ಐವರು ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ತಿರುಪತಿ–ಪಲಮನೇರು ರಾಷ್ಟ್ರೀಯ ಹೆದ್ದಾರಿ 69ರಲ್ಲಿ ಗುರುವಾರ ಬೆಳಿಗ್ಗೆ ನಡೆದಿದೆ.
ಪಲಮನೇರು ತಾಲೂಕಿನ ಗಂಗಾವರಂ ಹೋಬಳಿಯ ವೈಎಸ್‌ಆರ್ ಜಂಕ್ಷನ್ ಸಮೀಪ ಚಲಿಸುತ್ತಿದ್ದ ಕ್ಯಾಂಟರ್ ಲಾರಿಗೆ ಹಿಂಬದಿಯಿಂದ ಕಾರು ಢಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ರಾಜಾಜಿನಗರ ನಿವಾಸಿಗಳಾದ ಮೋಹನ್ ದಾಸ್ (70), ನಾಗರಾಜ್ (60), ಕುಸುಮ (60), ಜಯಂತಿ (59) ಹಾಗೂ ಪೂಜಾ (33) ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ಪಲಮನೇರು ಪೊಲೀಸ್ ಠಾಣೆಯ ಅಧಿಕಾರಿಗಳು ಹಾಗೂ ಸಾರಿಗೆ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ವಶಕ್ಕೆ ಪಡೆದು ಕುಟುಂಬದವರಿಗೆ ಮಾಹಿತಿ ನೀಡಲಾಗಿದೆ.