ಜನರು ಕರುಣೆ, ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು: ಮಾಜಿ ಸಚಿವ ರಮೇಶ್ ಕುಮಾರ್ ಬೇಸರ
ಕೆ.ಆರ್. ರಮೇಶ್ ಕುಮಾರ್
ಕೋಲಾರ: ಹೆಂಡತಿ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ನನ್ನ ಶ್ರೀನಿವಾಸಪುರ ಕ್ಷೇತ್ರದ ಜನರು ಕರುಣೆ, ಪ್ರೀತಿ ಮತ್ತು ಗೌರವ ತೋರದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು ಎಂದು ಮಾಜಿ ಸಚಿವ ಹಾಗೂ ಶ್ರೀನಿವಾಸಪುರ ಮಾಜಿ ಶಾಸಕ ಕೆ.ಆರ್. ರಮೇಶ್ ಕುಮಾರ್ ಬೇಸರ ವ್ಯಕ್ತಪಡಿಸಿದ್ದಾರೆ.
ಅವರು ಯೂಟ್ಯೂಬ್ ಚಾನೆಲ್ ವೊಂದರಲ್ಲಿ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪತ್ನಿ, ಮಕ್ಕಳು, ಕುಟುಂಬಕ್ಕೂ ಹೆಚ್ಚಾಗಿ ನಾನು ಕ್ಷೇತ್ರದ ಜನರನ್ನು ನೋಡಿಕೊಂಡಿದ್ದೆ. ನಾನು ಯಾವುದೇ ತಪ್ಪು ಮಾಡಿಲ್ಲ, ಆದರೂ ನನ್ನ ಮನಸ್ಥಿತಿ ಮತ್ತು ಕೆಲಸವನ್ನು ನೋಡದೆ ನಿಷ್ಕಾರುಣ್ಯವಾಗಿ ಸೋಲಿಸಿ ಬಿಟ್ಟರು. ನನ್ನನ್ನು ಏಕಾಂಗಿಯಾಗಿ ಮಾಡಿದರು. ನಾನು ಕೂಡ ಉಪ್ಪು ಕಾರ ತಿನ್ನುವ ಮನುಷ್ಯನೇ. ನಾನು ಸಿಮೆಂಟ್, ಸ್ಟೀಲ್ ನಿಂದ ಮಾಡಿದ ಗೊಂಬೆ ಅಲ್ಲ. ಹಾಗಾಗಿ ನನಗೂ ದುಃಖ, ನೋವು, ಬೇಸರ ಆಗುತ್ತದೆ. ಅದಕ್ಕೆ ಸ್ವಲ್ಪ ದಿನ ಅಜ್ಞಾತ ವಾಸದಲ್ಲಿದ್ದೆ ಎಂದು ಹೇಳಿದ್ದಾರೆ.
ಜನರನ್ನೇ ಕುಟುಂಬ ಎಂದುಕೊಂಡಿದ್ದ ನಾನು ಸೋತು ಏಕಾಂಗಿಯಾದಾಗ ಈ ಸಮಾಜಕ್ಕೆ ಏಕೆ ಮುಖ ತೋರಿಸಬೇಕು ಎಂಬ ಭಾವನೆ ನನ್ನಲ್ಲಿ ಬಂದಿತ್ತು. ಅದಕ್ಕೆ ಅಜ್ಞಾತ ವಾಸಕ್ಕೆ ಹೋಗುವ ನಿರ್ಧಾರ ತೆಗೆದುಕೊಂಡೆ ಎಂದು ತಿಳಿಸಿದ್ದಾರೆ.
ನನಗೆ ಜಾತಿ,ಹಣ, ಅಧಿಕಾರದ ಆಸೆ ಇಲ್ಲ. ಯಾವುದಕ್ಕೂ ಆಸೆಪಡದ ಇವನು ಈ ಪಾಳು ಬಿದ್ದಿರುವ ಭೂಮಿಗೆ ಹೋಗ್ತಾನಾ?, ಆಸೆಪಡ್ತಾನಾ? ಆ ತಪ್ಪು ಮಾಡ್ತಾನಾ ಅನ್ನೋ ಕರುಣೆಯೇ ಇಲ್ಲದೆ ಕೆಲವರು ಆರೋಪ ಮಾಡಿಬಿಟ್ಟರು. ಏನೆಲ್ಲಾ ಮಾತನಾಡಿದರು, ತೇಜೋವಧೆ ಮಾಡಿದರು, ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕವಾಗಿರುವುದು, ಅಧಿಕಾರದ ಅಪೇಕ್ಷೆ ಇಲ್ಲದೆ ಅಧಿಕಾರದಲ್ಲಿರುವುದು ತುಂಬಾ ಕಷ್ಟ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನನ್ನ ಪತ್ನಿ 47 ವರ್ಷ ನನ್ನ ಜೊತೆ ಇದ್ದಳು, ಒಂದು ಸೀರೆ ಕೊಡಿಸಿ ಎನ್ನಲಿಲ್ಲ, ನನ್ನನ್ನು ಸಿನಿಮಾಗೆ ಕರೆದುಕೊಂಡು ಹೋಗಿ ಎಂದು ಕೇಳಿಲ್ಲ, ಸರ್ಕಾರಿ ಕಾರಿನಲ್ಲಿ ಕೂರಲಿಲ್ಲ. ಯಾವುದಕ್ಕೂ ಆಸೆ ಪಡದೆ ಕಷ್ಟದಲ್ಲಿ ಭಾಗಿಯಾದಳು. ನಾನು ಗೌರವದಿಂದ, ಧೈರ್ಯದಿಂದ ಹಾಗೂ ಪ್ರಾಮಾಣಿಕವಾಗಿ ಬದುಕಲು ಕಾರಣವಾದಳು, ಸರ್ಕಾರಿ ಬಂಗಲೆಯಲ್ಲೂ ಇರಲು ಆಕೆ ಒಪ್ಪಲಿಲ್ಲ , ಅಂಥವರು ದೂರವಾದಾಗ ಮನಸ್ಸಿಗೆ ಕಷ್ಟವಾಗುತ್ತದೆ ಎಂದು ಭಾವುಕರಾಗಿದ್ದರು.
ನನಗೆ ಹೊಸದಾಗಿ ಕನಸು, ಆಸೆ ಏನೂ ಇಲ್ಲ. 50 ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. ಹಲವು ಏಳು ಬೀಳು ನೋಡಿದ್ದೇನೆ. 1970ರಲ್ಲಿ ಬೆಂಗಳೂರು ಕಾರ್ಪೊರೇಷನ್ ಚುನಾವಣೆಗೆ ಮಲ್ಲೇಶ್ವರಂನ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾಗಿದ್ದೆ. ಆಗ ನಾನು ದ್ವಿತೀಯ ಬಿ.ಎಸ್ಸಿ. ವಿದ್ಯಾರ್ಥಿಯಾಗಿದ್ದೆ. ಆಮೇಲೆ 1978 ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ ಮಾಡಿದೆ. ಆಗ ನನಗೆ 28 ವರ್ಷ, ಮೊದಲ ಚುನಾವಣೆಗೆ 15 ಸಾವಿರ ರೂಪಾಯಿ ಖರ್ಚು ಮಾಡಿದ್ದೆ. 1983ರಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ. ಆಗ ಅವರಿವರು ನೀಡಿದ 45 ಸಾವಿರ ರೂಪಾಯಿ ಖರ್ಚಾಗಿತ್ತು ಎಂದು ನೆನಪಿಸಿಕೊಂಡಿದ್ದಾರೆ.