Kolar | ಪ್ರಧಾನಿ ಉದ್ಘಾಟಿಸಿದ ಹೆಲಿಕಾಪ್ಟರ್ ಘಟಕಕ್ಕೆ ವಿದ್ಯುತ್ ಕಟ್ ಮಾಡಿ ಎಂದ ಶಾಸಕ ಕೊತ್ತೂರು ಮಂಜುನಾಥ್
"ಸ್ಥಳೀಯ ಯುವಕರಿಗೆ ತಳಮಟ್ಟದ ಕೆಲಸಗಳನ್ನು ನೀಡಿ, ಹೊರಗಿನವರಿಗೆ ಅಧಿಕಾರಿಗಳ ಹುದ್ದೆ ನೀಡುತ್ತಿದ್ದಾರೆ"
ಕೋಲಾರ: ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ ದೇಶದ ಮೊದಲ ಮಿನಿ ಹೆಲಿಕಾಪ್ಟರ್ ಜೋಡಣಾ ಘಟಕ ಕಾರ್ಯಕ್ರಮದಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಿವಾಸಿಗಳನ್ನು ನಿರ್ಲಕ್ಷ್ಯ ಮಾಡಿರುವುದಾಗಿ ಜಿಲ್ಲೆಯ ವೇಮಗಲ್ ಪಟ್ಟಣ ಪಂಚಾಯತ್ ಸಭೆಯಲ್ಲಿ ಕೈಗಾರಿಕೆಗಳ ವಿರುದ್ಧ ಶಾಸಕ ಕೊತ್ತೂರು ಮಂಜುನಾಥ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಿದ ಘಟಕಕ್ಕೆ ವಿದ್ಯುತ್ ಪೂರೈಕೆ ನಿಲ್ಲಿಸಬೇಕೆಂದು ಹೇಳಿರುವ ಅವರ ಹೇಳಿಕೆಗಳಿಂದ ವಿವಾದಗಳೆದ್ದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ಹೆಲಿಕಾಪ್ಟರ್ ಘಟಕದ ಉದ್ಘಾಟನಾ ಕಾರ್ಯಕ್ರಮಕ್ಕೆ ವೇಮಗಲ್ ಪಟ್ಟಣ ಪಂಚಾಯತ್ ಅಧ್ಯಕ್ಷರನ್ನು ಆಹ್ವಾನಿಸದೇ ಕಡಗಣನೆ ಮಾಡಲಾಗಿದೆ ಎಂದು ದೂರಿದ ಶಾಸಕ, ಕೈಗಾರಿಕಾ ಪ್ರದೇಶಕ್ಕೆ ಪ್ರತ್ಯೇಕ ವಿದ್ಯುತ್ ಪೀಡರ್ ವ್ಯವಸ್ಥೆ ಮಾಡದೇ, ವೇಮಗಲ್‌ನಿಂದಲೇ ವಿದ್ಯುತ್ ಪೂರೈಕೆ ಮಾಡುತ್ತಿರುವುದರಿಂದ ಸ್ಥಳೀಯರಿಗೆ ತೊಂದರೆ ಉಂಟಾಗಿದೆ ಎಂದಿದ್ದಾರೆ. ಇದೇ ರೀತಿಯಲ್ಲಿ ಮುಂದುವರಿದರೆ ಕೈಗಾರಿಕೆಗಳಿಗೆ ನೀಡುತ್ತಿರುವ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸುವಂತೆ ಎಚ್ಚರಿಸಿದ್ದಾರೆ.
ಸ್ಥಳೀಯ ಯುವಕರಿಗೆ ಕೇವಲ ತಳಮಟ್ಟದ ಕೆಲಸಗಳನ್ನು ನೀಡಿ, ಹೊರಗಿನವರಿಗೆ ಅಧಿಕಾರಿಗಳ ಹುದ್ದೆ ನೀಡುತ್ತಿರುವುದನ್ನೂ ಅವರು ಟೀಕಿಸಿದ್ದಾರೆ.
ಮಿನಿ ಹೆಲಿಕಾಪ್ಟರ್ ಘಟಕ ಜೋಡಣೆ ಕಾರ್ಯಕ್ರಮಕ್ಕೆ ಸ್ಥಳೀಯ ಜನಪ್ರತಿನಿಧಿಗಳ ಕಡಗಣನೆ ಮತ್ತು ವೇಮಗಲ್ -ಕುರುಗಲ್ ಪಟ್ಟಣ ಪಂಚಾಯಿತಿಗೂ ಮಾಹಿತಿ ನೀಡಿಲ್ಲ. ನಮ್ಮನ್ನು ಕಡೆಗಣಿಸುತ್ತಾರೆ, ಬೇರೆ ದೇಶದವರ ರೀತಿಯಲ್ಲಿ ನೋಡುತ್ತಿದ್ದಾರೆ. ಕೈಗಾರಿಕೆಗಳವರು ಖಾತೆ ಮಾಡಿಸಲು ಬಂದರೆ ಕೊಡಬೇಡಿ. ಅವರು ಏನು ಮಾಡುತ್ತಾರೆ ನೋಡೋಣ ಎಂದು ಹೇಳಿದರು.
ಮಿನಿ ಹೆಲಿಕ್ಯಾಪ್ಟರ್ ಘಟಕಕ್ಕೆ ನಮ್ಮ ವೇಮಗಲ್ ನಿಂದಲೇ ಕೈಗಾರಿಕೆ ಪ್ರದೇಶಕ್ಕೆ ವಿದ್ಯುತ್ ಹೋಗುತ್ತಿರುವುದು. ಕೈಗಾರಿಕೆ ಗಳು ಬಂದು ನಮ್ಮನ್ನು ಹಾಳು ಮಾಡುತ್ತಿದ್ದಾರೆ. ಅವರಿಂದ ನಮಗೆ ಏನೂ ಪ್ರಯೋಜನವಿಲ್ಲ. ಪೀಡರ್ ಬದಲಾವಣೆ ಮಾಡಿಲ್ಲವೆಂದರೆ ನಾವೆಲ್ಲ ಹೋಗಿ ವಿದ್ಯುತ್ ಕಟ್ ಮಾಡಿಸೋಣ. ವೇಮಗಲ್ ಗೆ ತೊಂದರೆಯಾಗುತ್ತಿದೆ, ಕೈಗಾರಿಕೆಗೆ ಅವರು ಪ್ರತ್ಯೇಕ ಸ್ಟೇಷನ್ ಮಾಡಿಕೊಳ್ಳಲಿ.