×
Ad

ಚಂದ್ರಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ ಮರ್ಯಾದಾ ಹತ್ಯೆ ನಡೆಯುತ್ತಿರುವುದು ಬೇಸರದ ಸಂಗತಿ : ಕೆ.ವಿ.ಪ್ರಭಾಕರ್

Update: 2026-02-21 13:00 IST

ಕೋಲಾರ : ಚಂದ್ರಲೋಕಕ್ಕೆ ಕಾಲಿಟ್ಟರೂ, ಕಾಲ ಬುಡದಲ್ಲೇ ಮರ್ಯಾದಾ ಹತ್ಯೆ ನಡೆಯುತ್ತಿರುವುದು ಬೇಸರದ ಸಂಗತಿ. ಜಾತೀಯತೆ, ಮೂಢನಂಬಿಕೆ ವಿಜ್ರಂಭಿಸುತ್ತಲೇ ಇದೆ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರದ ಕೆ.ವಿ.ಪ್ರಭಾಕರ್ ಬೇಸರ ವ್ಯಕ್ತಪಡಿಸಿದರು.

ಮನ್ವಂತರ ಪ್ರಕಾಶನ ಮತ್ತು ತರಬೇತಿ ಸಂಸ್ಥೆ ಆಯೋಜಿಸಿದ್ದ ನಾನಾ ಶ್ರಮಿಕ ಕ್ಷೇತ್ರಗಳ ಸಾಧಕರ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.‌

ಮನ್ವಂತರ ಸಂಸ್ಥೆ ದೊಡ್ಡ ದೊಡ್ಡ ಉದ್ಯಮಿಗಳನ್ನು, IAS, IPS ಅಧಿಕಾರಿಗಳು, ಅಧಿಕಾರಸ್ಥರು, ಹಣವಂತರನ್ನು ಕರೆಸಿ ಸನ್ಮಾನಿಸಿ ದೊಡ್ಡ ಹೆಸರನ್ನು ಸಂಪಾದಿಸಬಹುದಿತ್ತು. ಆದರೆ, ಪಾನಿಪೂರಿ ಮಾಡಿ ವಿಶ್ವಮಟ್ಟದಲ್ಲಿ ಗುರುತಿಸಿಕೊಂಡ ರಮೇಶ್ ಅವರನ್ನು ಗುರುತಿಸಿದೆ. ನಾವು ಬೆಳಗ್ಗೆ ಎದ್ದು ಮನೆಯಿಂದ ಹೊರಗೆ ಕಾಲಿಡುವ ಮೊದಲೇ ಬೀದಿಯನ್ನು ಗುಡಿಸಿ ಸ್ವಚ್ಚವಾಗಿಡುವ ಪೌರ ಕಾರ್ಮಿಕ ಸಮುದಾಯದ ಕೋಕಿಲಾ ಅವರನ್ನು ಗುರುತಿಸಿದೆ ಎಂದರು.

ಕೋಲಾರ ಅಂದರೆ ಸೌಹಾರ್ದತೆಯ ಮಂಟಪ ಇದ್ದ ಹಾಗೆ. ಎಲ್ಲಾ‌ ಧರ್ಮದವರೂ ಒಟ್ಟಾಗಿ ಬೆಸೆದುಕೊಂಡಿರುವ ಶ್ರಮಿಕ ಸಮಾಜ. ಈ ಕೋಲಾರದ ಮಣ್ಣಿನ ಸೌಹಾರ್ದತೆ ಮತ್ತು ಸಹಬಾಳ್ವೆಗೆ ನೀರು ಗೊಬ್ಬರ ಹಾಕುತ್ತಿರುವ ಮುಬಾರಕ್ ಬಾಗಬಾನ್ ಅವರನ್ನು ಗುರುತಿಸಿದೆ. ಎಲ್ಲರೂ ಸಿನಿಮಾ ಮತ್ತು ಸೀರಿಯಲ್ ನಟ ನಟಿಯರನ್ನು ಹುಡುಕಿಕೊಂಡು ಓಡುತ್ತಿರುವ ಹೊತ್ತಿನಲ್ಲಿ ಮನ್ವಂತರ ಸಂಸ್ಥೆ, ಸಾಂಪ್ರದಾಯಿಕ ಕಲೆ ಲಾವಣಿ ಹಾಡುವ ಅರಳು ಮಲ್ಲಿಗೆ ಪ್ರಭುದೇವರನ್ನು, ನಾದಸ್ವರ ಕಲಾವಿದ ವಿದ್ವಾನ್ ಬಿ.ಎನ್.ಗೋಪಾಲ್, ಜಾನಪದ ಕ್ಷೇತ್ರದ ಲಲಿತಮ್ಮ, ಕ್ರೀಡಾಪಟು ಮಹಾದೇವಿ, ನಿವೃತ್ತ ಶಿಕ್ಷಕಿ ಕುಮುದಾ, ವಕೀಲರೂ ಹಿರಿಯ ಕ್ರಿಕೆಟ್ ಪಟು ಗ್ರಾಮೀಣ ಪ್ರತಿಭೆ ಬಿ.ಸಿ.ಪರಮೇಶ್ ಅವರನ್ನು ಗುರುತಿಸಿ ಗೌರವಿಸುತ್ತಿದೆ. ಮಾತ್ರವಲ್ಲದೆ ಬಹುಭಾಷಿಕ ನೆಲದಲ್ಲಿ ಕನ್ನಡಕ್ಕಾಗಿ‌ ಶ್ರಮಿಸಿದ ಬಿ.ಎನ್.ಮೋಹನ್ ಕುಮಾರ್ ಅವರಿಗೆ ಮರಣೋತ್ತರವಾಗಿ ಪುರಸ್ಕಾರ ನೀಡುತ್ತಿರುವುದಕ್ಕೆ ವಿಶೇಷವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಇವರೆಲ್ಲರ ಕ್ಷೇತ್ರಗಳೂ ಬೇರೆ ಬೇರೆ ಇರಬಹುದು. ಆದರೆ, ಎಲ್ಲರನ್ನೂ ನಾನು "ಸಾಮಾಜಿಕ‌ ಶುಶ್ರೂಶಕರು. ಸಮಾಜದ ಆರೋಗ್ಯಕ್ಕಾಗಿ ಶ್ರಮಿಸುತ್ತಿರುವ Social Doctors ಎಂದು ಕರೆಯಲು ಇಚ್ಚಿಸುತ್ತೇನೆ. ಇಂಥಾ ಸಹೃದಯರನ್ನು ಸನ್ಮಾನಿಸುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಬಂದಿರುವುದು ನನಗೆ ಬಹಳ ಖುಷಿ ಕೊಟ್ಟಿದೆ ಎಂದರು.

ನಮ್ಮ ಜಿಲ್ಲೆಯ ಮಣ್ಣಿನಲ್ಲಿ ಮನ್ವಂತರ ಬಿತ್ತುತ್ತಿರುವ ಈ ಹೃದಯವಂತಿಕೆ ಮತ್ತು ಸೌಹಾರ್ದದ ಬೀಜಗಳು ಬೆಳೆದು ಹೆಮ್ಮರವಾಗಿ "ಸಹಬಾಳ್ವೆ" ಎನ್ನುವ ನೆರಳನ್ನು ಸದಾ ಕಾಲ ನೀಡುತ್ತಿರಲಿ ಎಂದು ಹಾರೈಸುತ್ತೇನೆ. ಉಳಿದಂತೆ, ಮನ್ವಂತರ ಸಂಸ್ಥೆ ಕೌಶಲ್ಯಾಭಿವೃದ್ಧಿ ಮತ್ತು ತರಬೇತಿ ಮೂಲಕ ಗ್ರಾಮೀಣ ಭಾಗದ ಯುವಜನರ ಬಾಳಿಗೆ ಆಸರೆ ಆಗುತ್ತಿದೆ. ನನ್ನ ಸಹಕಾರ ಸದಾ ಈ ಸಂಸ್ಥೆಯ ಜೊತೆಗೆ ಇರುತ್ತದೆ ಎಂದು ಹೇಳಲು ಬಯಸುತ್ತೇನೆ.‌ ಓದಿದ ಶಾಲೆಯಲ್ಲೇ ಸನ್ಮಾನಿತನಾಗಿದ್ದು ಧನ್ಯತೆಯ ಕ್ಷಣ ಎಂದು ಕೆ.ವಿ.ಪ್ರಭಾಕರ್‌ ಧನ್ಯತೆ ಅರ್ಪಿಸಿದರು.

ಮನ್ವಂತರ ಸಂಸ್ಥೆಯ ಅನಂತರಾಮು ಹಾಗೂ ಬಂಗಾರಪೇಟೆ ಪತ್ರಕರ್ತರ ಸಂಘದ ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News