Kolar | ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ , ಎಂ.ಆರ್.ಐ. ಸ್ಕ್ಯಾನ್ ಬಂದ್: ಸೌಲಭ್ಯ ಇಲ್ಲದೆ ರೋಗಿಗಳ ಪರದಾಟ
ಕೋಲಾರ : ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಸಿ.ಟಿ. ಸ್ಕ್ಯಾನ್ ಮತ್ತು ಎಂಆರ್‌ಐ ಸ್ಕ್ಯಾನ್ ಬಂದ್ ಆಗಿದ್ದು, ಇದರಿಂದ ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಮಂಗಳವಾರ ತಡರಾತ್ರಿ 12 ಗಂಟೆಯಿಂದ ಯಾವುದೇ ಮಾಹಿತಿ ನೀಡದೆ ಏಕಾಏಕಿ ಸ್ಕ್ಯಾನಿಂಗ್ ವಿಭಾಗ ಬಂದ್ ಮಾಡಲಾಗಿದೆ. ಕ್ರಸ್ನಾ ಡಯಾಗ್ನೋಸ್ಟಿಕ್ ಎನ್ನುವ ಖಾಸಗಿ ಸಂಸ್ಥೆ ನಿರ್ವಹಣೆ ಮಾಡುತ್ತಿರುವ ಸಿಟಿ ಮತ್ತು ಎಂಆರ್‌ಐ ಸ್ಕ್ಯಾನ್ ಸೌಲಭ್ಯ ಏಕಾಏಕಿ ನಿಲ್ಲಿಸಿರುವುದು ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ.
ಕ್ರಸ್ನಾ ಡಯಾಗ್ನೋಸ್ಟಿಕ್ ಸಂಸ್ಥೆಗೆ ರಾಜ್ಯಾದ್ಯಂತ ಆರೋಗ್ಯ ಇಲಾಖೆ 140 ಕೋಟಿ ಬಿಲ್ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಸೇವೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಇದ್ದಕ್ಕಿದ್ದಂತೆ ಆಸ್ಪತ್ರೆಯ ವೈದ್ಯಾಧಿಕಾರಿಗಳು ಮತ್ತು ಆಡಳಿತ ಅಧಿಕಾರಿಗಳಿಗೂ ಮಾಹಿತಿ ನೀಡದೆ ಸ್ಕ್ಯಾನಿಂಗ್ ಸೌಲಭ್ಯ ನಿಲ್ಲಿಸಲಾಗಿದೆ ಎನ್ನಲಾಗಿದೆ.
ಬಿಪಿಎಲ್ ಕಾರ್ಡ್ ರೋಗಿಗಳಿಗೆ ಉಚಿತ ಹಾಗೂ ಇತರರಿಗೆ ಕಡಿಮೆ ದರದಲ್ಲಿ ನೀಡುತ್ತಿದ್ದ ಸ್ಕ್ಯಾನ್ ಸೌಲಭ್ಯ ಮುನ್ಸೂಚನೆ ನೀಡಿದೆ ನಿಲ್ಲಿಸಿದ ಪರಿಣಾಮ ಬಡ ರೋಗಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಡಾ. ಎಂ.ಆರ್.ರವಿ , ಈ ಸಮಸ್ಯೆ ರಾಜ್ಯಾದ್ಯಂತ ಉಂಟಾಗಿದೆ, ಜಿಲ್ಲಾ ಶಸ್ತ್ರಚಿಕಿತ್ಸಕ ಜೊತೆ ಸಮಾಲೋಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.