ಬಾಲಿವುಡ್ ನಟ ಗೋವಿಂದ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲು
ನಟ ಗೋವಿಂದ (Photo: NDTV)
ಮುಂಬೈ: ಹಿರಿಯ ಬಾಲಿವುಡ್ ನಟ ಗೋವಿಂದ ಅವರು ಮಧ್ಯರಾತ್ರಿ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದು, ಅವರನ್ನು ಕೂಡಲೇ ಜುಹುವಿನ ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅವರು ಕಾನೂನು ಸಲಹೆಗಾರ ಮತ್ತು ಸ್ನೇಹಿತ ಲಲಿತ್ ಬಿಂದಾಲ್ ತಿಳಿಸಿದ್ದಾರೆ.
ಗೋವಿಂದರ ಆರೋಗ್ಯ ಸ್ಥಿತಿಯ ಕುರಿತು ಮಾಹಿತಿ ಹಂಚಿಕೊಂಡಿರುವ ಬಿಂದಾಲ್, “ತಮ್ಮ ನಿವಾಸದಲ್ಲಿ ಸಂಜೆ ವೇಳೆಗೆ ಮೂರ್ಛೆ ಹೋಗಿದ್ದ ಗೋವಿಂದ, ಕೂಡಲೇ ನನಗೆ ಕರೆ ಮಾಡಿದರು. ತಕ್ಷಣವೇ ಅಲ್ಲಿಗೆ ಧಾವಿಸಿದ ನಾನು, ಅವರನ್ನು ಕ್ರಿಟಿಕೇರ್ ಆಸ್ಪತ್ರೆಗೆ ದಾಖಲಿಸಿದ್ದೇನೆ. ಸದ್ಯ ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಕೆಲವು ಪರೀಕ್ಷೆಗಳಿಗೆ ಒಳಗಾಗಲಿದ್ದಾರೆ” ಎಂದು ಹೇಳಿದ್ದಾರೆ.
ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲೂ ಗೋವಿಂದರ ಆರೋಗ್ಯ ಸ್ಥಿತಿಯನ್ನು ಹಂಚಿಕೊಂಡಿರುವ ಬಿಂದಾಲ್, “ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನನ್ನ ಪ್ರೀತಿಯ ಗೋವಿಂದರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಆದಷ್ಟೂ ಶೀಘ್ರವಾಗಿ ಚೇತರಿಸಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ” ಎಂದು ಹಾರೈಸಿದ್ದಾರೆ.