×
Ad

ವಿಶ್ವದ ಗಮನಸೆಳೆದ ದಕ್ಷಿಣದ ಸಿನಿಮಾರಂಗಗಳ ಯಶೋಗಾಥೆ

Update: 2025-12-01 21:57 IST

ಸಾಂದರ್ಭಿಕ ಚಿತ್ರ | Photo Credit : freepik

ಎಸ್ ಎಸ್ ರಾಜಮೌಳಿ ತಮ್ಮ ಹೊಸ ಸಿನಿಮಾ ‘ವಾರಾಣಸಿ’ಯ ಟೀಸರ್ ಬಿಡುಗಡೆ ಮಾಡಿದ್ದಾರೆ. ಟಾಲಿವುಡ್ ಇನ್ನೊಂದು ದೃಶ್ಯವೈಭವವನ್ನು ತೆರೆಮೇಲೆ ಮೂಡಿಸುವ ಭರವಸೆಯಲ್ಲಿ ಸಿನಿಪ್ರೇಮಿಗಳು ಕಾಯುತ್ತಿದ್ದಾರೆ. ಇದೀಗ ತಾನೆ ಕನ್ನಡದ ‘ಕಾಂತಾರ ಅಧ್ಯಾಯ 1’ ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಸಾಧನೆ ಮಾಡಿದೆ. ಇತ್ತೀಚೆಗೆ ಟಾಲಿವುಡ್ ಸೇರಿದಂತೆ ದಕ್ಷಿಣದ ಸಿನಿಮಾಗಳು ಬಾಕ್ಸ್ ಆಫೀಸ್ ಮೇಲೆ ಅಬ್ಬರದ ಸವಾರಿ ಮಾಡುತ್ತಿವೆ. ಈ ಸಾಧನೆಯ ಗುಟ್ಟೇನು?

ಎಸ್ ಎಸ್ ರಾಜಮೌಳಿ ತಮ್ಮ ಹೊಸ ಸಿನಿಮಾ ‘ವಾರಾಣಸಿ’ಯ ಟೀಸರ್ ಬಿಡುಗಡೆ ಮಾಡಿದ್ದಾರೆ. ಸಿನಿಮಾದ ಬಿಡುಗಡೆಗೆ ಪ್ರೇಕ್ಷಕರು ತುದಿಗಾಲಲ್ಲಿ ಕಾಯುತ್ತಿರುವ ಸಂದರ್ಭದಲ್ಲಿ ಟಾಲಿವುಡ್ ಮತ್ತು ದಕ್ಷಿಣದ ಸಿನಿಮಾಗಳು ನಿಧಾನವಾಗಿ ಮುಖ್ಯವಾಹಿನಿಯಲ್ಲಿ ನೆಲೆ ಕಂಡುಕೊಂಡಿರುವ ಬಗ್ಗೆ ತಿಳಿದುಕೊಳ್ಳಲೇಬೇಕು. ಭಾರತೀಯ ಸಿನಿಮಾ ರಂಗವೆಂದರೆ ಬಾಲಿವುಡ್ ಎನ್ನುವ ದಿನಗಳನ್ನು ದೂರ ಮಾಡಿದ ಬೆಳವಣಿಗೆಯಿದು. ತೆಲುಗು ಮತ್ತು ಕನ್ನಡದ ಸಿನಿಮಾಗಳು ದೇಶಾದ್ಯಂತ ಮಾತ್ರವಲ್ಲದೆ, ಜಾಗತಿಕವಾಗಿ ಮನ್ನಣೆ ಪಡೆಯುತ್ತಿವೆ.

ದಕ್ಷಿಣದ ಸಿನಿಮಾಗಳ ಯಶೋಗಾಥೆಗೆ ಮೂಲವಾದ ಬಾಹುಬಲಿ

‘ಬಾಹುಬಲಿ’ ಸಿನಿಮಾ ಬಿಡುಗಡೆಯಾಗಿ ಒಂದು ದಶಕವಾಗಿದೆ. ಹೀಗಾಗಿ ಹಿಂತಿರುಗಿ ನೋಡಲು ಸೂಕ್ತ ಸಮಯ! ಬಾಲಿವುಡ್ಗೆ ಸಮಾಂತರವಾಗಿ/ ಪರ್ಯಾಯವಾಗಿ ಮತ್ತೊಂದು ಸಿನಿಮಾ ರಂಗ ಎದ್ದು ನಿಂತಿದೆ. ಅದೇ ದಕ್ಷಿಣದ ಸಿನಿಮಾರಂಗ. ಕಳೆದ ಹತ್ತು ವರ್ಷಗಳಿಂದ ದಕ್ಷಿಣದ ಸಿನಿಮಾಗಳು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿವೆ.

2015 ಜುಲೈ 10ರಂದು ಬಾಹುಬಲಿ ಭಾಗ 1 ಬಿಡುಗಡೆಯಾಗಿ ವಿಶ್ವದ ಗಮನ ಸೆಳೆದಿತ್ತು. ಬಾಕ್ಸ್ ಆಫೀಸ್ನಲ್ಲಿ ಅಬ್ಬರ ಮೆರೆದದ್ದಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆ ಪಡೆದಿತ್ತು. ಅದಾದ ನಂತರ ‘ಆರ್ಆರ್ಆರ್” ಬಾಹುಬಲಿಯನ್ನು ಮೀರಿದ ಬಾಕ್ಸ್ ಆಫೀಸ್ ಗೆಲುವನ್ನು ಸಾಧಿಸಿದೆ. ಈ ನಡುವೆ ಕನ್ನಡದ ಸಿನಿಮಾಗಳಾದ ‘ಕೆಜಿಎಫ್’ ಮತ್ತು ‘ಕಾಂತಾರ’ ಸಿನಿಮಾಗಳು ವಿಶ್ವಾದ್ಯಂತ ಗಮನ ಸೆಳೆದಿವೆ.

ಪ್ರಾದೇಶಿಕದಿಂದ ವಿಶ್ವಮಟ್ಟದ ಸಾಧನೆ

ತೆಲುಗು ಸಿನಿಮಾ ರಂಗ ಸೇರಿದಂತೆ ದಕ್ಷಿಣದ ಸಿನಿಮಾರಂಗ ಒಂದು ಕಾಲದಲ್ಲಿ ಭಾರತದ ಪ್ರಾದೇಶಿಕ ಸಿನಿಮಾಗಳನ್ನು ನಿರ್ಮಿಸುವ ಕೇಂದ್ರಗಳು ಎನ್ನುವ ಹಿರಿಮೆಯನ್ನಷ್ಟೇ ಸಾಧಿಸಿದ್ದವು. ಆದರೆ ಇದೀಗ, ಭಾವೋದ್ರೇಕ ಹುಟ್ಟಿಸುವ ಸಾಹಸ ಚಲನಚಿತ್ರಗಳು, ಪೌರಾಣಿಕ ಕಥಾ ಹಂದರಗಳು ಮತ್ತು ಭವ್ಯವಾಗಿ ರೂಪಿಸುವ ದೃಶ್ಯ ವೈಭವದ ಶೈಲಿಯಿಂದಾಗಿ ಹಿಂದಿ ಸಿನಿಮಾ ರಂಗವನ್ನು ಮೀರಿಸಿದ ಸಾಧನೆಗೆ ಕಾರಣವಾಗಿದೆ. ದಕ್ಷಿಣದ ತಾರೆಯರ ಅಬ್ಬರದ ಪ್ರದರ್ಶನ ಮತ್ತು ಮಹಾಕಾವ್ಯಗಳಂತಹ ಕಥಾ ನಿರೂಪಣೆ ವೀಕ್ಷಕರ ಮನ ಸೆಳೆದಿದೆ.

ಟಾಲಿವುಡ್ನ ಪಯಣ

ಟಾಲಿವುಡ್ ಮೂಲತಃ ರಾಮೋಜಿರಾವ್ ಫಿಲ್ಮ್ ಸಿಟಿಗೆ ನೆಲೆಯಾಗಿರುವ ಹೈದರಾಬಾದ್ನಲ್ಲಿ ನೆಲೆಯೂರಿದೆ. ರಾಮೋಜಿರಾವ್ ಫಿಲ್ಮ್ ಸಿಟಿ 1,666 ಎಕರೆಯ ಸೌಲಭ್ಯವಾಗಿದ್ದು, ವಿಶ್ವದ ಅತಿದೊಡ್ಡ ಸಿನಿಮಾ ಸ್ಟುಡಿಯೊ ಸಂಕೀರ್ಣವೆನ್ನುವ ಹೆಮ್ಮೆ ಪಡೆದಿದೆ. ಇಲ್ಲಿ ಡಜನ್ಗಟ್ಟಲೆ ನಿರ್ಮಾಣ ಸಂಸ್ಥೆಗಳು, ಸಿನಿಮಾ ಸೆಟ್ಗಳು ಮತ್ತು ನಿರ್ಮಾಣ ನಂತರದ ಸೌಲಭ್ಯಗಳಿವೆ. ತೆಲುಗು ಸಿನಿಮೋದ್ಯಮದಲ್ಲಿ ವಾರ್ಷಿಕ 300ಕ್ಕೂ ಹೆಚ್ಚು ಸಿನಿಮಾಗಳು ಬಿಡುಗಡೆಯಾಗುತ್ತವೆ. ಕನ್ನಡ ಸಿನಿಮಾರಂಗವೂ ಹಿಂದೆ ಬಿದ್ದಿಲ್ಲ. ವಾರ್ಷಿಕವಾಗಿ ನೂರಕ್ಕಿಂತ ಹೆಚ್ಚು ಸಿನಿಮಾಗಳು ಕನ್ನಡದಲ್ಲಿ ಬಿಡುಗಡೆಯಾಗುತ್ತಿವೆ.

ಡಬ್ಬಿಂಗ್ ಸಿನಿಮಾಗಳ ಆಕರ್ಷಣೆ

ಮುಖ್ಯವಾಗಿ ಹಿಂದಿ ಸಿನಿಮಾ ಚಾನಲ್ಗಳು ದಕ್ಷಿಣದ ಸಿನಿಮಾಗಳನ್ನು ಡಬ್ಬಿಂಗ್ ಮಾಡಿ ಸಿನಿ ಪ್ರೇಕ್ಷಕರಿಗೆ ತೋರಿಸಲು ಆರಂಭಿಸಿದ ನಂತರ ಬಾಲಿವುಡ್ಗೆ ಪರ್ಯಾಯ ಸಿನಿಮಾ ಲೋಕವೊಂದು ಸೃಷ್ಟಿಯಾಗಿತ್ತು. ದಕ್ಷಿಣದ ತಾರೆಯರ ಸಾಹಸಗಳು, ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳುವ ಕಥಾ ನಿರೂಪಣೆಗಳು ಹಿಂದಿ ಪ್ರೇಕ್ಷಕರಿಗೆ ಹೊಸತಾಗಿತ್ತು.

ಕೊರೊನಾ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಮೊಬೈಲ್ ವೆಬ್ಸರಣಿಗಳತ್ತ ಆಕರ್ಷಿತರಾದ ಯುವಜನತೆಯನ್ನು ಮತ್ತೆ ಚಿತ್ರಮಂದಿರಕ್ಕೆ ಕರೆತರುವುದು ಅತಿ ದೊಡ್ಡ ಸಮಸ್ಯೆಯಾಗಿತ್ತು. ಬಾಲಿವುಡ್ನ ಅದೇ ಹಳೇ ಕಥಾನಕಗಳು ಪ್ರೇಕ್ಷಕರನ್ನು ಗೆಲ್ಲಲು ವಿಫಲವಾಗಿದ್ದವು. ಅಂತಹ ಸಂದರ್ಭದಲ್ಲಿ ಹೊಸತನ್ನು ಹುಡುಕುತ್ತಿದ್ದ ಭಾರತೀಯ ಪ್ರೇಕ್ಷಕರು ದಕ್ಷಿಣದ ಸಿನಿಮಾ ರಂಗದತ್ತ ಹೊರಳಿದರು.

ರಿಮೇಕ್ನಿಂದ ಸ್ವಮೇಕ್

ಈ ಹಿಂದೆ ದಕ್ಷಿಣದ ಅನೇಕ ಸಿನಿಮಾಗಳು ಬಾಲಿವುಡ್ನಲ್ಲಿ ರಿಮೇಕ್ ಆಗುತ್ತಿದ್ದವು. ಡಬ್ಬಿಂಗ್ ಮೂಲಕ ಹಿಂದಿ ಪ್ರೇಕ್ಷಕರಿಗೆ ನೀಡಲಾಗುತ್ತಿತ್ತು. ಈ ಟ್ರೆಂಡ್ ನಿಧಾನವಾಗಿ ಬದಲಾಗಿ ನಿರ್ದೇಶಕರು ಹಿಂದಿ ಪ್ರೇಕ್ಷಕರನ್ನೇ ಗಮನವಿರಿಸಿ ಸಿನಿಮಾ ನಿರ್ಮಿಸಲು ಆರಂಭಿಸಿದರು. ತೆಲುಗಿನ ಜನಪ್ರಿಯ ನಟರಾದ ಮಹೇಶ್ ಬಾಬು, ಅಲ್ಲು ಅರ್ಜುನ್, ಪ್ರಭಾಸ್, ರಾಮ ಚರಣ್ ಹಾಗೂ ಎನ್ಟಿ ರಾಮ್ರಾವ್ ಜ್ಯೂನಿಯರ್ ಮೊದಲಾದ ತಾರೆಯರನ್ನು ದೇವರಂತೆ ಪೂಜಿಸುವ ಅಭಿಮಾನಿಗಳಿದ್ದಾರೆ. ಈ ಅಭಿಮಾನವನ್ನೇ ಸೆರೆಹಿಡಿದು ಹೊಸ ಲೋಕವನ್ನು ತೆರೆಯ ಮೇಲೆ ಸೃಷ್ಟಿಸುವ ಪರಿಣತ ನಿರ್ದೇಶಕರಿದ್ದಾರೆ. ಇದೇ ಟಾಲಿವುಡ್ನ ಸಾಧನೆಯ ಗುಟ್ಟು!

ಬಾಹುಬಲಿ ಭಾಗ 1 ಮತ್ತು 2 ನಂತರ, ಆರ್ಆರ್ಆರ್, ಪುಷ್ಪಾ ಭಾಗ1 ಮತ್ತು ಭಾಗ 2 ಅಭೂತಪೂರ್ವ ಯಶಸ್ಸು ಕಂಡ ತೆಲುಗು ಸಿನಿಮಾಗಳು. ಈ ನಡುವೆ ಕನ್ನಡದ ‘ಕೆಜಿಎಫ್’ ಮತ್ತು ‘ಕಾಂತಾರ’ಗಳು ವಿಶ್ವಾದ್ಯಂತ ತಮ್ಮ ವಿಶಿಷ್ಟ ಕಥಾನಕಗಳು ಮತ್ತು ದೃಶ್ಯ ವೈಭವದಿಂದ ಹೆಸರು ಮಾಡಿವೆ. ತಮಿಳು ಮತ್ತು ಮಲಯಾಳಂ ಸಿನಿಮಾರಂಗಗಳೂ ಈ ಪರ್ಯಾಯ ಸಿನಿಮಾ ರಂಗದ ಯಶಸ್ಸಿನ ಲಾಭ ಗಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News